22ನೇ ಸ್ಥಾನಕ್ಕೆ ತೃಪ್ತಿಪಟ್ಟ ಧಾರವಾಡ

| Published : May 10 2024, 01:33 AM IST

ಸಾರಾಂಶ

2023-24ನೇ ಸಾಲಿಗೆ ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆ ಶೇ.72.67ರಷ್ಟು ಹಾಗೂ ಮೊದಲ ಬಾರಿಗೆ ಪರೀಕ್ಷೆ ಬರೆದವರ ಪೈಕಿ ಶೇ.74.85ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷ ಶೇ. 83ರಷ್ಟು ಫಲಿತಾಂಶವಾಗಿದ್ದು ಜಿಲ್ಲೆಯು 24ನೇ ಸ್ಥಾನದಲ್ಲಿತ್ತು.

ಧಾರವಾಡ:

ವಿದ್ಯಾಕಾಶಿ ಎಂದೇ ಕರೆಯುವ ಧಾರವಾಡ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ನಿರೀಕ್ಷಿತ ಸಾಧನೆ ಮಾಡಲಿಲ್ಲ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ ಒಂದಂಕಿ ಸ್ಥಾನಕ್ಕೆ ಬರಬೇಕು ಎನ್ನುವ ಆಶಯ ಈಡೇರದೇ ರಾಜ್ಯದ ಪೈಕಿ ಧಾರವಾಡ ಜಿಲ್ಲೆಯು ಶೇ.72.67ರಷ್ಟು ಸಾಧನೆ ಮಾಡುವ ಮೂಲಕ 22ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಈಗಾಗಲೇ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿ 2023-24ನೇ ಸಾಲಿಗೆ ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆ ಶೇ.72.67ರಷ್ಟು ಹಾಗೂ ಮೊದಲ ಬಾರಿಗೆ ಪರೀಕ್ಷೆ ಬರೆದವರ ಪೈಕಿ ಶೇ.74.85ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷ ಶೇ. 83ರಷ್ಟು ಫಲಿತಾಂಶವಾಗಿದ್ದು ಜಿಲ್ಲೆಯು 24ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ. 72.67ರಷ್ಟು ಸಾಧನೆ ಮಾಡಿ 22ನೇ ಸ್ಥಾನಕ್ಕೆ ಏರಿಕೆ ಕಂಡಿರುವುದು ಮಾತ್ರ ಸಮಾಧಾನಕರ ಸಂಗತಿ. ಇಡೀ ರಾಜ್ಯದ ಫಲಿತಾಂಶವೇ ಕಡಿಮೆಯಾದ ಹಿನ್ನೆಲೆಯಲ್ಲಿ ಶೇ. 10ರಷ್ಟು ಫಲಿತಾಂಶ ಕುಸಿದರೂ ಧಾರವಾಡ ಜಿಲ್ಲೆಯು ಎರಡು ಸ್ಥಾನದಲ್ಲಿ ಏರಿಕೆ ಕಂಡಿದೆ.

ಬಾಲಕಿಯರೇ ಮೈಲುಗೈ:

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಸಕ್ತ ವರ್ಷ 13532 ಬಾಲಕರು, 14011 ಬಾಲಕಿಯರು ಸೇರಿ 27543 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 8,940 ಬಾಲಕರು, 1,16,775 ಬಾಲಕಿಯರು ಸೇರಿ ಒಟ್ಟು 20,614 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಜಿಲ್ಲೆಯ ಬಾಲಕಿಯರೇ ಮೊದಲ ಮೂರು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಲ್ಲದೇ ಉತ್ತೀರ್ಣದಲ್ಲೂ ಅವರೇ ಮೇಲುಗೈ ಸಾಧಿಸಿದ್ದಾರೆ. ಶೇ. 66.07ರಷ್ಟು ಬಾಲಕರು ಪಾಸಾಗಿದ್ದರೆ, ಶೇ.83ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ತಾಲೂಕುಗಳ ಫಲಿತಾಂಶ ಪರಿಗಣಿಸಿದರೆ, ಧಾರವಾಡ ತಾಲೂಕು ಶೇ.84.16, ಧಾರವಾಡ ನಗರ ಸೇ.82.07, ಕಲಘಟಗಿ ಶೇ.82.07, ನವಲಗುಂದ ಶೇ.81.21, ಕುಂದಗೋಳ ಶೇ.77.62, ಹುಬ್ಬಳ್ಳಿ ಗ್ರಾಮೀಣ ಶೇ.74.08 ಹಾಗೂ ಹುಬ್ಬಳ್ಳಿ ನಗರ ಶೇ. 61ರಷ್ಟು ಮಾತ್ರ ಸಾಧನೆ ಮಾಡಿದೆ. ಪ್ರದೇಶವಾರು ಫಲಿತಾಂಶ ನೋಡಿದರೆ ಗ್ರಾಮೀಣ ಪ್ರದೇಶದ ಶೇ. 80.22ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ ನಗರದ ಶೇ.71ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿ ರವಿಕುಮಾರ ಬಾರಾಟಕ್ಕೆ ಮಾಹಿತಿ ನೀಡಿದರು.

ಜಿಲ್ಲೆಯ 802 ಶಾಲೆಗಳು ಶೇ. 90ರಿಂದ 100ರಷ್ಟು ‍ಫಲಿತಾಂಶ ಮಾಡಿದರೆ, 2,373 ಶಾಲೆಗಳು ಶೇ. 80ರಿಂದ 89ರಷ್ಟು, 3316 ಶಾಲೆಗಳು ಶೇ.70 ರಿಂದ 79ರಷ್ಟು, 4437 ಶಾಲೆಗಳು ಶೇ. 60ರಿಂದ 69ರಷ್ಟು, 5564 ಶಾಲೆಗಳು ಶೇ. 50ರಿಂದ 59ರಷ್ಟು ಹಾಗೂ 4123 ಶಾಲೆಗಳು 40 ರಿಂದ 49ರಷ್ಟು ಸಾಧನೆ ಮಾಡಿವೆ.ಈ ಬಾರಿ ಅನ್ವಯಿಕ ಪ್ರಶ್ನೆಗಳು ಹೆಚ್ಚಿರುವ ಹಾಗೂ ಎಲ್ಲ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿರುವುದಕ್ಕೆ ಫಲಿತಾಂಶದಲ್ಲಿ ಕಡಿಮೆಯಾಗಿದೆ. ಆದರೆ, ರಾಜ್ಯದ ಸ್ಥಾನಗಳ ಪೈಕಿ ಎರಡು ಸ್ಥಾನಗಳಲ್ಲಿ ಏರಿಕೆ ಕಂಡಿದೆ. ಮುಂದಿನ ವರ್ಷವಾದರೂ ಉತ್ತಮ ಫಲಿತಾಂಶ ತೆಗೆಯಲು ಶಾಲಾ ಆರಂಭದ ದಿನದಿಂದಲೂ ಪ್ರಯತ್ನಿಸಲಾಗುವುದು ಎಂದು ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಹೇಳಿದರು.

ಮೂರು ಶಾಲೆ ಶೂನ್ಯ ಸಂಪಾದನೆ:

ಧಾರವಾಡ ಜಿಲ್ಲೆಯಲ್ಲಿ ಮೂರು ಖಾಸಗಿ ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದು ಬೇಸರದ ಸಂಗತಿ. ಮಂಟೂರಿನ ಕೃಪಾಧನಂ ಹೈಸ್ಕೂಲ್‌, ಶಲವಡಿಯ ಜಯಪ್ರಕಾಶ ನಾರಾಯಣ ಹೈಸ್ಕೂಲ್‌ ಹಾಗೂ ಐಎನ್‌ಎ ರಾಮರಾವ್‌ ಸೈನಿಕ ಶಾಲೆಯ ಒಂದೇ ಒಂದು ವಿದ್ಯಾರ್ಥಿಗಳು ಪಾಸಾಗದೇ ಶೂನ್ಯ ಸಂಪಾದನೆ ಮಾಡಿವೆ.30 ಶಾಲೆಗಳು ಶೇ. 100ರಷ್ಟು ಸಾಧನೆ:

ಜಿಲ್ಲೆಯ 12 ಶಾಲೆಗಳು ಸರ್ಕಾರಿ, ಒಂಭತ್ತು ಶಾಲೆಗಳು ಅನುದಾನಿತ ಹಾಗೂ ಒಂಭತ್ತು ಖಾಸಗಿ ಶಾಲೆಗಳು ಶೇ. 100ರಷ್ಟು ಸಾಧನೆ ಮಾಡಿವೆ.