ಧಾರವಾಡ ತಹಸೀಲ್ದಾರ್ ಕಚೇರಿ ದುರಸ್ತಿ ಯಾವಾಗ?

| Published : Jan 03 2024, 01:45 AM IST

ಸಾರಾಂಶ

ಶತಮಾನದ ಇತಿಹಾಸ ಹೊಂದಿದ್ದರೂ ಕಟ್ಟಡದ ತಳಪಾಯ, ಗೋಡೆಗಳು ಇನ್ನೂ ಸಾಕಷ್ಟು ಗಟ್ಟಿಯಾಗಿವೆ. ಆದರೆ, ಹೆಂಚಿನ ಕಟ್ಟಡವಾಗಿದ್ದು ಮೇಲ್ಚಾವಣಿ ಶಿಥಿಲವಾಗಿದೆ. ದೊಡ್ಡ ಮಳೆ ಅಥವಾ ಗಾಳಿ ಬಂದಾಗ ಅನಾಹುತ ಸಂಭವಿಸಿದರೂ ಅಚ್ಚರಿ ಏನಿಲ್ಲ.

- ಜೈಲಾಗಿದ್ದ ಕಟ್ಟಡ ಸ್ವಾತಂತ್ರ್ಯಾನಂತರ ತಹಸೀಲ್ದಾರ್ ಕಚೇರಿ

- ರೈತರ ಮಹತ್ವದ ದಾಖಲೆ ರಕ್ಷಣೆಗೋಸ್ಕರವಾದರೂ ಕಚೇರಿ ದುರಸ್ತಿ ಅಗತ್ಯಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲೆಯ ಬೇರೆ ಬೇರೆ ತಹಸೀಲ್ದಾರ್‌ ಕಚೇರಿಗಳು ನವೀಕೃತಗೊಂಡರೂ 1912ರಲ್ಲಿ ಬ್ರಿಟಿಷರ ಆಡಳಿತದಲ್ಲಿ ನಿರ್ಮಾಣಗೊಂಡಿರುವ ಇಲ್ಲಿಯ ತಹಸೀಲ್ದಾರ್‌ ಕಚೇರಿ ಮಾತ್ರ ದುಸ್ಥಿತಿಯಲ್ಲಿದ್ದು, ನವೀಕರಣಕ್ಕಾಗಿ ಕಾಯುತ್ತಿದೆ.

ಶತಮಾನದ ಇತಿಹಾಸ ಹೊಂದಿದ್ದರೂ ಕಟ್ಟಡದ ತಳಪಾಯ, ಗೋಡೆಗಳು ಇನ್ನೂ ಸಾಕಷ್ಟು ಗಟ್ಟಿಯಾಗಿವೆ. ಆದರೆ, ಹೆಂಚಿನ ಕಟ್ಟಡವಾಗಿದ್ದು ಮೇಲ್ಚಾವಣಿ ಶಿಥಿಲವಾಗಿದೆ. ದೊಡ್ಡ ಮಳೆ ಅಥವಾ ಗಾಳಿ ಬಂದಾಗ ಅನಾಹುತ ಸಂಭವಿಸಿದರೂ ಅಚ್ಚರಿ ಏನಿಲ್ಲ. ಆಗಾಗ ದುರಸ್ತಿ ಕಾರ್ಯ ಕೈಗೊಂಡರೂ ಮಳೆ-ಗಾಳಿ-ಬಿಸಿಲಿನ ಹೊಡೆತಕ್ಕೆ ಕಟ್ಟಡ ದಿನದಿಂದ ದಿನಕ್ಕೆ ಸೊರಗುತ್ತಿದೆ. ಶಿಥಿಲಗೊಂಡ ಕಚೇರಿಯಲ್ಲಿಯೇ ಹತ್ತಾರು ವರ್ಷಗಳಿಂದ ಆಡಳಿತ ನಡೆಯುತ್ತಿದ್ದು, ಎಚ್ಚೆತ್ತುಕೊಂಡು ಇನ್ನಾದರೂ ಈ ಕಚೇರಿ ನವೀಕರಣ ಅಥವಾ ಹೊಸ ಕಟ್ಟಡ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಹಲವು ದಿನಗಳಿಂದ ಇದೆ.

ದಾಖಲೆಗಳ ರಕ್ಷಣೆ..

ತಹಸೀಲ್ದಾರ್‌ ಕೋಣೆಯ ಪಕ್ಕದಲ್ಲಿಯೇ ಮತ್ತೊಂದು ಕಟ್ಟಡದಲ್ಲಿ (ರೆಕಾರ್ಡ್‌ ರೂಂ) ಇಡೀ ಧಾರವಾಡ ತಾಲೂಕಿನ ರೈತರ ಭೂಮಿಗಳಿಗೆ ಸಂಬಂಧಿಸಿ 14 ಲಕ್ಷ ದಾಖಲೆಗಳು ಕಾಗದದ ರೂಪದಲ್ಲಿವೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯ ವರೆಗೆ ಆ ದಾಖಲೆಗಳನ್ನು ಕಾಪಿಟ್ಟುಕೊಂಡು ಬಂದಿದ್ದು, ಇನ್ಮುಂದೆ ಕಷ್ಟ ಸಾಧ್ಯ ಎನ್ನುವ ಕಚೇರಿ ಸಿಬ್ಬಂದಿ, ಕೆಲವೇ ದಿನಗಳಲ್ಲಿ ಕಾಗದದ ದಾಖಲೆಗಳು ನಾಶವಾಗುವ ಎಲ್ಲ ಸಾಧ್ಯತೆಗಳಿವೆ. ಕೂಡಲೇ ಅವುಗಳನ್ನು ರಕ್ಷಣೆ ಮಾಡುವ ಜತೆಗೆ ಡಿಜಿಟಲೀಕರಣ ಮಾಡಿದರೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಕಾಗದದ ದಾಖಲೆಗಳು ಪುಡಿಯಾಗುವ, ಅದರ ಮೇಲಿನ ಅಕ್ಷರಗಳು ಅಳಿಸಿ ಹೋಗುವ ಸಾಧ್ಯತೆ ಇದೆ. ದಾಖಲೆ ರಕ್ಷಣೆ ಮಾಡಿಟ್ಟಿರುವ ಕೋಣೆಯು ಹಂಚಿನದ್ದಾಗಿದ್ದು ಧೂಳಿನಿಂದಲೂ ತುಂಬಿಕೊಂಡಿದೆ.

ಇದರೊಂದಿಗೆ ಭೂಮಿ ಕೇಂದ್ರ, ಅಟಲ್‌ಜಿ ಸ್ನೇಹ ಕೇಂದ್ರ, ನೆಮ್ಮದಿ ಕೇಂದ್ರಗಳೆಲ್ಲವೂ ಹೆಂಚಿನ ಕಟ್ಟಡದಲ್ಲಿದ್ದು ಧೂಳು ಸಾಕಷ್ಟಿದೆ, ಮಳೆಗಾಲದಲ್ಲಿ ಮೇಲ್ಚಾವಣಿ ಸೋರುತ್ತವೆ. ಈ ಕೇಂದ್ರಗಳ ಮೂಲಕ ಸೌಲಭ್ಯ ಪಡೆಯುವ ರೈತರಿಗೂ ಹಾಗೂ ಸಿಬ್ಬಂದಿಗೂ ಕಚೇರಿಯಲ್ಲಿ ಜಾಗದ ಸಮಸ್ಯೆಯಿಂದ ತೊಂದರೆಯಾಗುತ್ತಿದೆ.

ಜೈಲಾಗಿತ್ತು ಈ ಕಚೇರಿ

ಬ್ರಿಟಿಷರ ಕಾಲದಲ್ಲಿ ಧಾರವಾಡ ತಹಸೀಲ್ದಾರ್‌ ಕಚೇರಿ ಕಾರಾಗೃಹವಾಗಿತ್ತು. ಕೈದಿಗಳನ್ನು ಇಡಲಾಗುತ್ತಿದ್ದ ಕೋಣೆಗಳನ್ನು ಸದ್ಯ ಕಚೇರಿ ಅಧಿಕಾರಿಗಳು ಬಳಸುತ್ತಿದ್ದಾರೆ. ಕೋಣೆಗಳು ಚಿಕ್ಕವಾಗಿದ್ದು ಸಾರ್ವಜನಿಕರು ಸೌಲಭ್ಯಗಳಿಗೆ ಬಂದಾಗ ಇಕ್ಕಟ್ಟಿನ ಜಾಗದಲ್ಲಿ ತೊಂದರೆಯಾಗುತ್ತಿದೆ. ಗ್ರಾಮಸೇವಕ, ಗ್ರಾಮಲೆಕ್ಕಾಧಿಕಾರಿಗಳು ಕುಳಿತುಕೊಳ್ಳಲು ಹಾಗೂ ಕಚೇರಿ ವಸ್ತುಗಳಿಗೆ ಜಾಗವಿಲ್ಲ. ಚಾವಣಿಯ ನೀರು ಹರಿದು ಹೋಗಲು ಹಾಕಿದ ಹರನಾಳಿಗೆ ತುಕ್ಕು ಹಿಡಿದರೂ ಅವುಗಳನ್ನು ಬದಲಿಸಿಲ್ಲ. ಮಳೆ ಬಂದಾಗ ಎಲ್ಲೆಂದರಲ್ಲಿ ಅಲ್ಲಿ ನೀರು ಹರಿದಾಡುತ್ತದೆ. ಕಚೇರಿ ಆವರಣದಲ್ಲಿ ಕಸದ ತೊಟ್ಟಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ಅದರ ಪಕ್ಕದ ಮರವೊಂದು ಸುಟ್ಟು ಹೋಗಿದೆ. ಅದು ಯಾವಾಗ ಬುಡಸಮೇತ ಬಿದ್ದು ಅನಾಹುತ ಮಾಡುತ್ತದೆಯೋ ಗೊತ್ತಿಲ್ಲ.

ತಹಸೀಲ್ದಾರ್‌ ಕಚೇರಿ ನೂತನ ಕಟ್ಟಡ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಯಾವ ಸರ್ಕಾರವೂ ಸ್ಪಂದಿಸಿಲ್ಲ. ಕ್ರಿಯಾಶೀಲರಾಗಿರುವ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಈ ಕಚೇರಿಗೆ ಭೇಟಿ ನೀಡಿ ಇಲ್ಲಾಗಬೇಕಾದ ಕಾರ್ಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯ ಎಂದು ನರೇಂದ್ರ ಗ್ರಾಮದ ಶಂಕರ ಕೋಮಾರ ದೇಸಾಯಿ ಎಚ್ಚರಿಸಿದರು.

ಬ್ರಿಟಿಷರ ಆಡಳಿತದ ಈ ಕಚೇರಿ ಇನ್ನೂ ಗಟ್ಟಿಯಾಗಿದೆ. ಆದರೆ, ದುಸ್ಥಿತಿಯಲ್ಲಿದ್ದು, ನವೀಕರಣಕ್ಕಾಗಿ ₹42 ಲಕ್ಷ ವೆಚ್ಚದ ಪ್ರಸ್ತಾವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಜತೆಗೆ 14 ಲಕ್ಷ ಭೂ ದಾಖಲೆಗಳು ಇದ್ದು ಈಗಾಗಲೇ ಒಂದುಲಕ್ಷ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಇನ್ನುಳಿದ ಎಲ್ಲ ದಾಖಲೆಗಳನ್ನು ಡಿಜಿಲೀಕರಣ ಮಾಡಲು ₹52 ಲಕ್ಷ ಅನುದಾನ ಕೇಳಿದ್ದು, ಶೀಘ್ರ ಬಿಡುಗಡೆಯಾಗುವ ಭರವಸೆ ಇದೆ ಎಂದು ಧಾರವಾಡ ತಹಸೀಲ್ದಾರ ದೊಡ್ಡಪ್ಪ ಹೂಗಾರ ತಿಳಿಸುತ್ತಾರೆ.