ಯರಗೋಳ್ ನೀರು ಪೂರೈಕೆಗೆ ಇನ್ನೂ ತಾಂತ್ರಿಕ ಅಡ್ಡಿ...!

| Published : Jan 03 2024, 01:45 AM IST

ಸಾರಾಂಶ

ಯರಗೋಳ್ ನೀರಾವರಿ ಯೋಜನೆಯ ವ್ಯಾಪ್ತಿಗೆ ಬರುವ ಮಾಲೂರು, ಕೋಲಾರ ನಗರ ಹಾಗೂ ಮಾರ್ಗ ಮಧ್ಯದ 45 ಗ್ರಾಮಗಳಿಗೆ ಇನ್ನೂ ಯರಗೋಳ್‌ ನೀರು ಪೂರೈಕೆ ಭಾಗ್ಯ ಸಿಕ್ಕಿಲ್ಲ. ತಾಂತ್ರಿಕೆ ತೊಂದರೆ, ಪೈಪ್‌ ಲೈನ್‌ ಹಾನಿ ಕಾರಣದಿಂದಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ.

ರಮೇಶ್‌ ಕೆ.ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಯಾವುದೇ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಗೆ ವರದಾನವಾಗಿರುವ ಹಾಗೂ ಮೂರು ತಾಲೂಕಿನ ನಗರ ಜನರ ಬಾಯಾರಿಕೆ ನೀಗಿಸುವ ಯರಗೋಳ್ ನೀರಾವರಿ ಯೋಜನೆ ಉದ್ಘಾಟನೆಯಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಬಂಗಾರಪೇಟೆ ಪಟ್ಟಣಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದೆ.

ಯೋಜನೆಯ ವ್ಯಾಪ್ತಿಗೆ ಬರುವ ಮಾಲೂರು, ಕೋಲಾರ ನಗರ ಹಾಗೂ ಮಾರ್ಗ ಮಧ್ಯದ 45 ಗ್ರಾಮಗಳಿಗೆ ಇನ್ನೂ ಯರಗೋಳ್‌ ನೀರು ಪೂರೈಕೆ ಭಾಗ್ಯ ಸಿಕ್ಕಿಲ್ಲ. ತಾಂತ್ರಿಕೆ ತೊಂದರೆ, ಪೈಪ್‌ ಲೈನ್‌ ಹಾನಿ ಕಾರಣದಿಂದಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಯಾವುದೇ ನದಿ, ನಾಲೆಗಳಿಲ್ಲ

ಜಿಲ್ಲೆಯ ಜನರಿಗೆ ಯಾವುದೇ ನದಿ ನಾಲೆಗಳಿಲ್ಲದೆ ಬರೀ ಮಳೆ ನೀರನ್ನೇ ಆಶ್ರಯಿಸಿಕೊಂಡು ಕುಡಿಯುವ ನೀರಿಗೆ ಹಾಗೂ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು. ತಾಲೂಕಿನ ತಮಿಳುನಾಡು ಗಡಿ ಭಾಗದಲ್ಲಿರುವ ಯರಗೋಳ್ ಗ್ರಾಮದ ಬಳಿ ಎರಡು ಬೆಟ್ಟಗಳ ನಡುವೆ ವ್ಯರ್ಥವಾಗಿ ತಮಿಳುನಾಡಿಗೆ ಮಳೆ ನೀರು ಹರಿದುಹೋಗುತ್ತಿತ್ತು. ಇದನ್ನು ತಡೆದು ಅಣೆಕಟ್ಟು ನಿರ್ಮಾಣ ಮಾಡಿ ಮೂರು ತಾಲೂಕಿನ ಜನರಿಗೆ ಹಾಗೂ ದಾರಿ ಮಧ್ಯೆ ಸಿಗುವ ೪೫ ಹಳ್ಳಿಗಳಿಗೂ ಶಾಶ್ವತವಾಗಿ ಕುಡಿಯುವ ನೀರು ಪೂರೈಸಬಹುದೆಂದು ೧೪ ವರ್ಷಗಳ ಹಿಂದೆಯೇ ಯರಗೋಳ್‌ ಯೋಜನೆಗೆ ಅಡಿಪಾಯ ಹಾಕಿಲಾಯಿತು.

ಉದ್ದೇಶಿತ ಯೋಜನೆಗೆ ೨೪೦ಕೋಟಿಗೂ ಹೆಚ್ಚಿನ ಅನುದಾನ ಬಳಕೆಯಾಗಿದೆ. ನಿಗದಿತ ಸಮಯಕ್ಕೆ ಪೂರ್ಣವಾಗದೆ ೧೪ ವರ್ಷಗಳ ಕಾಲ ಕುಂಟುತ್ತಾ ಸಾಗಿ ಕಳೆದ ವರ್ಷ ನವೆಂಬರ್‌ ೧೧ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಲೋಕಾರ್ಪಣೆ ಮಾಡಿದ್ದಾರೆ. ಆದರೆ ಡ್ಯಾಂನ ನೀರು ಮಾತ್ರ ಬರೀ ಬಂಗಾರಪೇಟೆ ಪಟ್ಟಣಕ್ಕೆ ಮಾತ್ರ ಪೂರೈಕೆಯಾಗುತ್ತಿದೆ.

ವಾರಕ್ಕೆ 5 ದಿನ ಯರಗೋಳ್‌ ನೀರು

ಕಳೆದ ಎರಡು ತಿಂಗಳಿಂದ ಬಂಗಾರಪೇಟೆ ಪಟ್ಟಣದ ನಾಗರಿಕರಿಗೆ ಡ್ಯಾಂನ ನೀರು ಕುಡಿಯುವ ಭಾಗ್ಯ ಸಿಕ್ಕಿದೆ. ವಾರಕ್ಕೆ ಐದು ದಿನ ಯರಗೋಳ್ ಡ್ಯಾಂ ನೀರನ್ನು ಪುರಸಭೆ ಸರಬರಾಜು ಮಾಡುತ್ತಿದೆ. ಉಳಿದ ಎರಡು ದಿನಗಳು ಬೋರ್ ವೆಲ್ ನೀರನ್ನು ಪಾರೈಸಲಾಗುತ್ತಿದೆ. ಡ್ಯಾಂ ನೀರನ್ನು ವಾರವಿಡೀ ಸರಬರಾಜು ಮಾಡಿ ಬೋರ್ ವೆಲ್‌ ಸ್ಥಗಿತಗೊಳಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ವಾರಕ್ಕೆರಡು ದಿನ ಬೋರ್‌ವೆಲ್‌ ನೀರು ಪೂರೈಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ ತಿಳಿಸಿದ್ದಾರೆ.

ಮಾಲೂರು ನಾಗರಿಕರಿಗೆ ಸರಬರಾಜಿಗೆ ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡಿದ್ದರೂ ಅಲ್ಲಲ್ಲಿ ರಸ್ತೆ ಕಾಮಗಾರಿ ಮಾಡುವಾಗ ಪೈಪ್‌ಗಳು ಹಾನಿ ಆಗಿರುವುದರಿಂದ ಅದನ್ನು ದುರಸ್ತಿಪಡಿಸುವುದು ನಗರ ನೀರು ಸರಬರಾಜು ಇಲಾಖೆಗೆ ದೊಡ್ಡ ಸವಾಲಾಗಿದೆ. ಒಂದು ಕಡೆ ದುರಸ್ತಿ ಮಾಡುತ್ತಿದ್ದರೆ ಮತ್ತೊಂದು ಕಡೆ ಹಾನಿ ಆಗುತ್ತಿರುವುದರಿಂದ ನೀರು ಸರಬರಾಜು ಮಾಡಲು ವಿಳಂಬವಾಗಿದೆ.

ಕೋಲಾರ ನಗರಕ್ಕೆ ಪರೀಕ್ಷಾರ್ಥ ನೀರು

ಕೋಲಾರ ನಗರದವರೆಗೂ ಈಗಾಗಲೇ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ನೀರು ಪರೀಕ್ಷಾರ್ಥ ಕೆಲಸ ಮಾಡಲಾಗುತ್ತಿದೆ,ಇದರಿಂದ ಮತ್ತಷ್ಟು ದಿನಗಳ ಕಾಲ ಅಲ್ಲಿನ ಜನರು ನೀರನ್ನು ಕುಡಿಯಲು ಸಾಧ್ಯವಿಲ್ಲ.ಅಧಿಕಾರಿಗಳ ಪ್ರಕಾರ ನೀರನ್ನು ಪರೀಕ್ಷಾರ್ಥ ಮಾಡಿ ಕೆಲವು ಕಡೆ ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಾಗರಿಕರು ಮಾತ್ರ ಇನ್ನೂ ಯರಗೋಳ್ ನೀರು ಕೋಲಾರಕ್ಕೆ ಪೂರೈಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಯೋಜನೆ ಕಾಮಗಾರಿಗಳು ಪೂರ್ಣವಾಗುವ ಮೊದಲೇ ಆತುರವಾಗಿ ಸರ್ಕಾರ ಉದ್ಘಾಟನೆ ಮಾಡಿತೇ ಎಂಬ ಅನುಮಾನ ಜನರು ವ್ಯಕ್ತಪಡಿಸಿದ್ದಾರೆ. ಮೂರು ನಗರಗಳಿಗೆ ಸಮರ್ಪಕವಾಗಿ ಡ್ಯಾಂ ನೀರು ಪೂರೈಸಲು ಸಾಧ್ಯವಾಗಿಲ್ಲ, ಹೀಗಿರುವಾಗ ಮಾರ್ಗಮಧ್ಯದ ೪೫ ಗ್ರಾಮಗಳಿಗೆ ನೀರು ಪೂರೈಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಯರಗೋಳ್ ಯೋಜನೆಯ ನೀರನ್ನು ಈಗಾಗಲೇ ಬಂಗಾರಪೇಟೆ ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ಮಾಲೂರು ನಗರಕ್ಕೆ ಸರಬರಾಜಿಗೆ ತಾಂತ್ರಿಕ ಅಡಚಣೆ ಉಂಟಾಗಿದ್ದು ಆದಷ್ಟು ಬೇಗ ನಿವಾರಿಸಿ ಪೂರೈಸಲಾಗುವುದು. ಕೋಲಾರ ನಗರದ ಕೆಲವು ಭಾಗಗಳಿಗೆ ನೀರು ಪೂರೈಸಲಾಗುತ್ತಿದೆ. ಕೆಲವು ಕಡೆ ಪರೀಕ್ಷಾರ್ಥ ಕೆಲಸ ಸಾಗಿದೆ.

-ವೆಂಕಟೇಶ್, ಎಇಇ. ನಗರ ನೀರು ಸರಬರಾಜು ಇಲಾಖೆ