ಧಾರವಾಡ ಜನರ ಪ್ರಮುಖ ಬೇಡಿಕೆ ಇದಾಗಿದೆ. ಜನತೆಯ ಆಗ್ರಹದ ಹಿನ್ನೆಲೆಯಲ್ಲಿ ಸ್ಥಳೀಯ ಎಲ್ಲ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಸರ್ಕಾರದ ಅನುಮತಿ ಪಡೆದು ಸಚಿವ ಸಂಪುಟ ಸಹ ಒಪ್ಪಿಗೆ ಸೂಚಿಸಿದೆ.
ಧಾರವಾಡ:
ಹುಬ್ಬಳ್ಳಿ--ಧಾರವಾಡ ಮಹಾನಗರ ಪಾಲಿಕೆಯಿಂದ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸಲು ಅಂತಿಮ ಅಧಿಸೂಚನೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿಸುವುದಾಗಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಗೆ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.ಇಲ್ಲಿಯ ಸರ್ಕೂಟ್ ಹೌಸ್‌ನಲ್ಲಿ ಶುಕ್ರವಾರ ವೇದಿಕೆ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವೇದಿಕೆ ನೀಡಿರುವ ಮನವಿ ಸ್ವೀಕರಿಸಿದ ಸಚಿವರು, ಧಾರವಾಡ ಜನರ ಪ್ರಮುಖ ಬೇಡಿಕೆ ಇದಾಗಿದೆ. ಜನತೆಯ ಆಗ್ರಹದ ಹಿನ್ನೆಲೆಯಲ್ಲಿ ಸ್ಥಳೀಯ ಎಲ್ಲ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಸರ್ಕಾರದ ಅನುಮತಿ ಪಡೆದು ಸಚಿವ ಸಂಪುಟ ಸಹ ಒಪ್ಪಿಗೆ ಸೂಚಿಸಿದೆ. ರಾಜ್ಯಪಾಲರಿಂದ ಈ ಕಡತಕ್ಕೆ ಒಪ್ಪಿಗೆ ಸಿಗುವುದು ವಿಳಂಬವಾದ ಹಿನ್ನೆಲೆ ಹೋರಾಟ ವೇದಿಕೆ ಸದಸ್ಯರೊಂದಿಗೆ ಅವರನ್ನು ಭೇಟಿ ಮಾಡಿದ್ದೇವು. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಸಹಿ ಮಾಡಿ ಸರ್ಕಾರಕ್ಕೆ ಮರಳಿ ಕಳುಹಿಸಿದ್ದಾರೆ. ಈಗಾಗಲೇ ಒಪ್ಪಿಗೆ ಸಿಕ್ಕಿರುವುದರಿಂದ ಆದಷ್ಟು ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಲು ಯಾವುದೇ ತೊಂದರೆ ಇಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಮುಖ್ಯಮಂತ್ರಿಗಳೊಂದಿಗೆ ಹೋರಾಟ ವೇದಿಕೆ ಸಭೆ ನಡೆಸಲು ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ಹೋರಾಟ ವೇದಿಕೆ ಅಧ್ಯಕ್ಷ ಬಿ.ಡಿ. ಹಿರೇಮಠ, ಪ್ರತ್ಯೇಕ ಪಾಲಿಕೆ ವಿಷಯದಲ್ಲಿ ಸಚಿವ ಸಂತೋಷ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದ ಮಟ್ಟದಲ್ಲಿ ಹಾಗೂ ರಾಜ್ಯಪಾಲರ ಮಟ್ಟದಲ್ಲೂ ವೇದಿಕೆಗೆ ಬೆಂಬಲ ನೀಡಿದ್ದಾರೆ. ಆದರೆ, ರಾಜ್ಯಪಾಲರ ಒಪ್ಪಿಗೆಯಾಗಿ ಎರಡು ತಿಂಗಳು ಕಳೆದರೂ ನಗರಾಭಿವೃದ್ಧಿ ಇಲಾಖೆಯಿಂದ ಅಂತಿಮ ಅಧಿಸೂಚನೆ ಹೊರಬರಲು ವಿಳಂಬವಾಗುತ್ತಿರುವುದು ಧಾರವಾಡ ಜನರನ್ನು ಕಂಗೆಡಿಸಿದೆ. ಹೋರಾಟ ವೇದಿಕೆಯಿಂದ ಈಗಾಗಲೇ ಐದು ಬಾರಿ ಮನವಿ ಸಹ ಸಲ್ಲಿಸಲಾಗಿದೆ. ಇದರ ಪರಿಣಾಮ ಪ್ರಸ್ತುತ ಕಡತವು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪರಿಶೀಲನೆಯಾಗಿದ್ದು, ಮುಖ್ಯಮಂತ್ರಿಗಳ ಅನುಮೋದನೆಗಾಗಿ ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಲಾಡ್ ಅವರನ್ನು ಹೋರಾಟ ವೇದಿಕೆ ನಿಯೋಗವನ್ನು ಮುಖ್ಯಂಮತ್ರಿಗಳ ಬಳಿ ಕರೆದೊಯ್ದು, ಅಂತಿಮ ಅಧಿಸೂಚನೆ ಹೊರಡಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಆ. 21ರೊಳಗೆ ಮುಖ್ಯಮಂತ್ರಿಗಳ ಭೇಟಿ ನಿಗದಿಯಾದರೆ, ಅಂದು ಹಮ್ಮಿಕೊಳ್ಳಲು ನಿರ್ಧರಿಸಿರುವ 24 ಗಂಟೆಗಳ ನಿರಂತರ ಅಹೋರಾತ್ರಿ ನಿರಶನ ಮುಂದೂಡಲಾಗುವುದು. ಇಲ್ಲದೇ ಹೋದಲ್ಲಿ ಜನಾಂದೋಲನ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಬಿ.ಡಿ. ಹಿರೇಮಠ ಸರ್ಕಾರಕ್ಕೆ ಎಚ್ಚರಿಸಿದರು.
ಈ ವೇಳೆ ವೇದಿಕೆ ಪರವಾಗಿ ವೆಂಕಟೇಶ ಮಾಚಕನೂರ, ವಸಂತ ಅರ್ಕಾಚಾರ, ಶಿವಶಂಕರ ಹಂಪಣ್ಣವರ, ದಾನಪ್ಪ ಕಬ್ಬೇರ, ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಮಹಾದೇವ ಹೊರಟ್ಟಿ, ಬಸವಪ್ರಭು ಹೊಸಕೇರಿ, ಮೋಹನ ರಾಮದುರ್ಗ, ಗುರುರಾಜ ಹುಣಸಿಮರದ, ಅರವಿಂದ ಏಗನಗೌಡರ, ವೀರಣ್ಣ ಶೆಟ್ಟರ್ ಹಾಗೂ ರವಿ ಮಾಳಿಗೇರ ಸೇರಿದಂತೆ ಇತರರು ಇದ್ದರು.