ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಕನ್ನಡ ನಾಡು-ನುಡಿಗೆ ಸಮಗ್ರವಾಗಿ ಧಾರವಾಡದ ಕೊಡುಗೆ ಅಪಾರವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಶೋಧನೆ ಮಾಡಿ ಇಂದಿನ ಪೀಳಿಗೆಗೆ ಮಹನೀಯರ ಐತಿಹಾಸಿಕ ಸೇವೆ ಹಾಗೂ ಕೊಡುಗೆಗಳನ್ನು ತಿಳಿಸುವಲ್ಲಿ ವಿಶೇಷ ಕಾಳಜಿ ವಹಿಸಲಿ.

ಧಾರವಾಡ:

ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಕನ್ನಡ ನಾಡು-ನುಡಿಗೆ ಸಮಗ್ರವಾಗಿ ಧಾರವಾಡದ ಕೊಡುಗೆ ಅಪಾರವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಶೋಧನೆ ಮಾಡಿ ಇಂದಿನ ಪೀಳಿಗೆಗೆ ಮಹನೀಯರ ಐತಿಹಾಸಿಕ ಸೇವೆ ಹಾಗೂ ಕೊಡುಗೆಗಳನ್ನು ತಿಳಿಸುವಲ್ಲಿ ವಿಶೇಷ ಕಾಳಜಿ ವಹಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ 15ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇಂದಿನ ಬದಲಾದ ಶೈಕ್ಷಣಿಕ ವಾತಾವರಣದಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಜೋತು ಬಿದ್ದಿದ್ದೇವೆ. ಆದರೆ, ಐಎಎಸ್‌, ಕೆಎಎಎಸ್‌ ಮುಂತಾದ ಸ್ಪರ್ಧಾತ್ನಕ ಪರೀಕ್ಷೆ ಎದುರಿಸುವವರಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಇದು ಕನ್ನಡದ ಅಂತಃಶಕ್ತಿಯ ಧ್ಯೋತಕ. ಕನ್ನಡ ಸರ್ಕಾರಿ ಮಾಧ್ಯಮ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ನಿರ್ಲಕ್ಷ ಮಾಡದೆ ಸಂದರ್ಭಾನುಸಾರ ಅವರ ಶೈಕ್ಷಣಿಕ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸರ್ಕಾರ, ಸಂಘ ಸಂಸ್ಥೆಗಳು, ಚಿಂತಕರು ಯೋಚಿಸಬೇಕಾಗಿದೆ ಎಂದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿಶ್ವೇಶ್ವರಿ ಹಿರೇಮಠ ಅವರಿಗೆ ಸಾಧಕರ ಸನ್ಮಾನ ಮಾಡಲಾಯಿತು. ತಮ್ಮ ಪತಿ, ಜಾನಪದ ಗಾಯಕ ಬಸಲಿಂಗಯ್ಯ ಹಿರೇಮಠರೊಂದಿಗೆ ಸೇರಿ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಿಸಿದರು. ಸಾಮವೇದ ಸಂಗೀತ ವಿದ್ಯಾಲಯದ ಮಂಜುನಾಥ ಭಜಂತ್ರಿ ಹಾಗೂ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ಕುರ್ತಕೋಟಿಯ ಡಾ. ಬಿ.ಆರ್. ಅಂಬೇಡಕರ ಸಾಂಸ್ಕೃತಿಕ ಕಲಾ ತಂಡದಿಂದ ಹಾಡು ನೃತ್ಯ ನಡೆಯಿತು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ಭಿನ್ನವತ್ತಳೆ ಫಲಕ ವಾಚಿಸಿ, ಗುರು ಹಿರೇಮಠ ವಂದಿಸಿದರು.