ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಧೀರೆ

| Published : Oct 25 2025, 01:03 AM IST

ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಧೀರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮಳ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕ. ಪ್ರಬಲ ಆಂಗ್ಲರ ವಿರುದ್ಧ ಹೋರಾಟ ನಡೆಸಿ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಕೀರ್ತಿ ಕಿತ್ತೂರಿನ ವೀರರಾಣಿ ಚನ್ನಮ್ಮನಿಗೆ ಸಲ್ಲುತ್ತದೆ ಎಂದು ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರವೀರರಾಣಿ ಕಿತ್ತೂರು ರಾಣಿ ಚನ್ನಮ್ಮಳ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕ. ಪ್ರಬಲ ಆಂಗ್ಲರ ವಿರುದ್ಧ ಹೋರಾಟ ನಡೆಸಿ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಕೀರ್ತಿ ಕಿತ್ತೂರಿನ ವೀರರಾಣಿ ಚನ್ನಮ್ಮನಿಗೆ ಸಲ್ಲುತ್ತದೆ ಎಂದು ಅಕಾಡೆಮಿ ಸದಸ್ಯೆ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ಯವಿದ್ಯಾಲಯದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮಾಜಿ ಜಯಂತಿ ಹಾಗೂ ವಿಜಯೋತ್ಸವದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ ಮಾನವೀಯತೆಗೆ ಹೆಸರಾದ ರಾಣಿ ಚನ್ನಮ್ಮನ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕವಾಗಿದೆ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಹೋರಾಟಕ್ಕಿಂತ 33 ವರ್ಷ ಮೊದಲು ಕಿತ್ತೂರಿನ ರಾಣಿ ಚನ್ನಮ್ಮ ಅವರು ಬ್ರಿಟಿಷ್ ಅಧಿಕಾರಿಗಳಿಗೆ ಮೊದಲ ಸೋಲನ್ನು ನೀಡಿದ್ದರು. ಕಿತ್ತೂರಿನ ಸರ್ದಾರ್‌ ಗುರುಸಿದ್ಧಪ್ಪ ಅಮಟೂರು, ಬಾಳಪ್ಪ ಬಿಚ್ಚುಗತ್ತಿ, ಚನ್ನಬಸಪ್ಪ, ಸಂಗೊಳ್ಳಿ ರಾಯಣ್ಣ, ವಡ್ಡರ ಯಲ್ಲಣ್ಣನಂತಹ ವೀರರ ಸಂಘಟಿತ ಹೋರಾಟ ಇಂದಿಗೂ ಭಾರತದ ಇತಿಹಾಸದಲ್ಲಿ ಅಜರಾಮರವಾಗಿದೆ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶಟ್ಟಿ ಮಾತನಾಡಿ, ಮೌಲ್ಯಾಧಾರಿತ ಬದುಕಿನಿಂದ ವ್ಯಕ್ತಿತ್ವ ರೂಪಿಸಿಕೊಳ್ಳುವ ತುರ್ತು ಅಗತ್ಯ ನಮ್ಮ ಮುಂದಿದೆ. ಇಂದು ರೀಲ್ಸ್ ಲೈಫ್‌ಗಿಂತ ರಿಯಲ್ ಲೈಫ್ ಬಗ್ಗೆ ಎಚ್ಚರಿಕೆಯಿಂದ ಬದುಕುವುದು ಮುಖ್ಯ. ಕಿತ್ತೂರು ರಾಣಿ ಚನ್ನಮ್ಮ ಅವರಂತಹ ಸಬಲೀಕೃತ ರಾಣಿಯ ಜೀವನಾದರ್ಶಗಳು ವಿದ್ಯಾರ್ಥಿನಿಯರಿಗೆ ಮಾದರಿಯಾಗಬೇಕು ಎಂದರು.

ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಕರ್ನಾಟಕ ಎಂದರೆ ಅದು ಕಿತ್ತೂರು ಚನ್ನಮ್ಮ ಅವರ ನೆನಪನ್ನು ಜೀವಂತವಾಗಿಟ್ಟಿದೆ. ಅವರ ಬದುಕು ನಮಗೆ ಚೈತನ್ಯ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಸಂಯೋಜಕ ಬಸವ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ.ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಚನ್ನಮ್ಮ ಅವರ ಜೀವನ ಇತಿಹಾಸ ಹೆಣ್ಣುಮಕ್ಕಳಿಗೆ ಸ್ವಾಭಿಮಾನಿ ಬದುಕನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು. ಉಪನ್ಯಾಸಕ್ಕೆ ಸಂಬಂಧಿಸಿದಂತೆ ಹತ್ತು ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿನಿಯರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.

ಪ್ರೊ.ಬಿ.ಎಲ್.ಲಕ್ಕಣ್ಣನವರ, ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ವಿನಿ, ಅನ್ನಪೂರ್ಣ ಪ್ರಾರ್ಥಿಸಿದರು. ರಾಜೇಶ್ವರಿ ನಿರೂಪಿಸಿದರು. ಅಶ್ವಿನಿ ವಂದಿಸಿದರು.