ಜರ್ಮನಿ ದೇಶದ ಪರ ಆಡುವಂತೆ ಅಡಾಲ್ಪ್ ಹಿಟ್ಲರ್ ಆಹ್ವಾನ ತಿರಸ್ಕರಿಸಿ ದೇಶಾಭಿಮಾನ ಮೆರೆದ ಧ್ಯಾನಚಂದ್ ಭಾರತದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಮೂಲಕ ನಾನೊಬ್ಬ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹಿರಿಯ ಕ್ರೀಡಾಪಟು ಗಿರೀಶಗೌಡ್ರ ಪಾಟೀಲ ತಿಳಿಸಿದರು.
ಬ್ಯಾಡಗಿ: ಜರ್ಮನಿ ದೇಶದ ಪರ ಆಡುವಂತೆ ಅಡಾಲ್ಪ್ ಹಿಟ್ಲರ್ ಆಹ್ವಾನ ತಿರಸ್ಕರಿಸಿ ದೇಶಾಭಿಮಾನ ಮೆರೆದ ಧ್ಯಾನಚಂದ್ ಭಾರತದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಮೂಲಕ ನಾನೊಬ್ಬ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹಿರಿಯ ಕ್ರೀಡಾಪಟು ಗಿರೀಶಗೌಡ್ರ ಪಾಟೀಲ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಹಾಗೂ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಹಾಕಿ ಮಾಂತ್ರಿಕನೆಂದೇ ಕರೆಯಲ್ಪಡುತ್ತಿದ್ದ ಧ್ಯಾನಚಂದ್ ದೇಶದ ಕೀರ್ತಿಯನ್ನು ವಿದೇಶಗಳಲ್ಲಿ ರಾರಾಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರ ಜನ್ಮದಿನದಂದು ಕ್ರೀಡಾ ದಿನ ಆಚರಿಸುತ್ತಿರುವುದು ಕ್ರೀಡಾಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.
400 ಗೋಲು ಗಳಿಸಿದ ಧ್ಯಾನಚಂದ: ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಎಲ್. ಮಹ್ಮದ ಇಸ್ಮಾಯಿಲ್ ಮಾತನಾಡಿ, ಬಹುತೇಕ ಕ್ರೀಡಾಪಟುಗಳು ನಿಕ್ ನೇಮ್ ಇಟ್ಟುಕೊಳ್ಳುತ್ತಾರೆ, ಚಂದ್ರನ ಬೆಳಕಿನಲ್ಲಿ ಅಭ್ಯಾಸ ನಡೆಸಿ ಖ್ಯಾತಿಗಳಿಸಿದ ಪರಿಣಾಮ ಧ್ಯಾನಸಿಂಗ್ ಎಂಬ ಹೆಸರು ಧ್ಯಾನಚಂದ್ ಆಗಿ ಪರಿವರ್ತನೆಗೊಂಡಿತು, ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ 400 ಗೋಲುಗಳಿಸಿ ಭಾರತಕ್ಕೆ ಚಿನ್ನದ ಪದಕ ಕೊಡಿಸುವಲ್ಲಿ ಧ್ಯಾನಚಂದ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ಕ್ರೀಡೆಗಳು ಸೊರಗುತ್ತಿವೆ: ಮಂಜುನಾಥ ಆರೀಕಟ್ಟಿ ಮಾತನಾಡಿ, ಜಿಲ್ಲೆಯಲ್ಲಿರುವ ತಾಲೂಕು ಕ್ರೀಡಾಂಗಣಗಳಿಗೆ ತರಬೇತುದಾರರು ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದೇ ಕ್ರೀಡಾ ಪ್ರತಿಭೆಗಳು ಅರಳುವ ಮುನ್ನವೇ ಕಮರುತ್ತಿವೆ. ಕ್ರೀಡಾಂಗಣಗಳಿಗೆ ಮೂಲಸೌಕರ್ಯ ಕಲ್ಪಿಸಿದರೇ ಮಾತ್ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೊಂದು ನಿಜವಾದ ಅರ್ಥ ಬರಲಿದೆ ಎಂದರು.
ಮುಖ್ಯವಾಹಿನಿಗೆ ತರಬೇಕಾಗಿದೆ: ಕಬಡ್ಡಿ ಕೋಚ್ ಮಂಜುಳ ಭಜಂತ್ರಿ ಮಾತನಾಡಿ, ಪ್ರೋಕಬಡ್ಡಿ ಪರಿಚಯದ ಬಳಿಕ ವಿಶ್ವದೆಲ್ಲೆಡೆ ಕಬಡ್ಡಿ ಆಟಕ್ಕೆ ಬೇಡಿಕೆ ಹೆಚ್ಚಾಗಿದೆ, ಒಟ್ಟು 23 ದೇಶಗಳಲ್ಲಿ ಕಬಡ್ಡಿ ಪರಿಚಯಿಸಲಾಗಿದೆ, ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರುವ ಶೇ.2 ಅನುದಾನವನ್ನು ಶೇ.20ಕ್ಕೆ ಹೆಚ್ಚಿಸಿದಲ್ಲಿ ಇನ್ನಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಬಹುದಾಗಿದ್ದು ತನ್ಮೂಲಕ ಕ್ರೀಡಾಕ್ಷೇತ್ರವನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.ಇದಕ್ಕೂ ಮುನ್ನ ಧ್ಯಾನಚಂದ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ಪ್ರಕಾಶ ತಾವರಗಿ, ಮಹಾಂತೇಶ ಕೆಂಬಿ, ಖೊಖೋ ತರಬೇತುದಾರ ಮಾಲತೇಶ, ತೀರ್ಪುಗಾರರರಾದ ಎಂ.ಆರ್.ಕೋಡಿಹಳ್ಳಿ ನವೀನ ಹಿರೇಮಠ, ವಿರೇಶ, ಬಸವರಾಜ ಸೇರಿದಂತೆ ಕಬಡ್ಡಿ ಕ್ರೀಡಾಪಟುಗಳು ಉಪಸ್ಥಿತರಿದ್ದರು.