ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ವಿಶ್ವ ಮಧುಮೇಹ ದಿನಾಚರಣೆ ನೆರವೇರಿತು.

ಉಳ್ಳಾಲ: ದೀರ್ಘಾವಧಿ ಮಧುಮೇಹ ಕಾಯಿಲೆ ಅತೀ ಪುರಾತನ ಕಾಲದಿಂದ ಮನುಕುಲಕ್ಕೆ ಬಾಧಿಸುವ ಮಾರಣಾಂತಿಕ ಕಾಯಿಲೆಯಾಗಿದ್ದು, ಪ್ರಸ್ತುತ ದೇಶದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಈ ಕಾಯಿಲೆಯ ಮಾಹಿತಿ, ಜಾಗೃತಿ, ಮುಂಜಾಗ್ರತೆ, ಉಪಶಮನ ಚಿಕಿತ್ಸೋಪಾಯ ಕ್ರಮದ ಬಗ್ಗೆ ಜ್ಞಾನದ ಅವಶ್ಯಕತೆ ಇದೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ವೀಕ್ಷಕ ಪ್ರತಿನಿಧಿಯ ಡಾ.ಮಹಮ್ಮದ್ ಇಸ್ಮಾಯಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಜರಗಿದ ವಿಶ್ವ ಮಧುಮೇಹ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಯು.ಕೆ. ಮೋನು ಈ ವೈದ್ಯಕೀಯ ಕಾರ್ಯಗಾರ ಉದ್ಘಾಟಿಸಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಆಯೋಜಿಸಿದ ವೈದ್ಯಕೀಯ ಕಾರ್ಯಗಾರದ ಸದುಪಯೋಗವನ್ನು ಪ್ರತಿನಿಧಿಗಳು ಪಡೆಯಬೇಕು ಎಂದು ಶುಭಕೋರಿದರು.

ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವದಾಸ್ ರೈ, ಮಧುಮೇಹ ಕಾಯಿಲೆ ಒಂದು ಆಧುನಿಕ ಜೀವನ ಶೈಲಿ ಪದ್ಧತಿಯ ಕಾಯಿಲೆ ಆಗಿದ್ದು, ಕೆಲಸ, ಕಾರ್ಯಗಳ ಒತ್ತಡ, ಬೊಜ್ಜು, ಅಧಿಕ ಸಕ್ಕರೆ ಅಂಶದ ಆಹಾರ ಸೇವನೆ ಮತ್ತು ವ್ಯಾಯಾಮ ರಹಿತ ಜೀವನ ಪ್ರಮುಖ ಕಾರಣ ಎಂದರು.ಕಾರ್ಯಾಗಾರದಲ್ಲಿ ಖ್ಯಾತ ವೈದ್ಯಕೀಯ ಶಾಸ್ತ್ರಜ್ಞ ಹಾಗೂ ಮಧುಮೇಹ ಕಾಯಿಲೆಯ ತಜ್ಞರಾದ ಡಾ. ಸೌರಭ ಭಟ್, ಡಾ.ಪ್ರಶಾಂತ್ ಹುಬ್ಬಳ್ಳಿ, ಡಾ.ಸುದೀಪ್ ಕೆ., ಡಾ.ಅಖಿಲಾ ಭಂಡಾರ್ಕರ್, ಡಾ.ವಿಜಯ್ ಕುಮಾರ್, ಡಾ.ಎಂ. ಪ್ರಜ್ಞ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅತಿಥಿ ಉಪನ್ಯಾಸ ನೀಡಿದರು. ಡಾ. ದೇವದಾಸ್ ರೈ ಮಧುಮೇಹ ಕಾಯಿಲೆ ಬಗ್ಗೆ ರಸಪ್ರಶ್ನೆ ಸ್ಪರ್ಧಾಕೂಟ ಆಯೋಜಿಸಿ ಬಹುಮಾನ ವಿತರಿಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ಶಹನವಾಜ್ ಮನಿಪಾಡಿ, ಆಡಳಿತ ಅಧಿಕಾರಿ ಡಾ.ರೋಹನ್ ಮೊನಿಸ್ ಇದ್ದರು.

ಕಾರ್ಯಾಗಾರದಲ್ಲಿ ಸುಮಾರು ೧೯೦ ವೈದ್ಯರು, ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ.ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ.ಲಕ್ಷಿತಾ ಸುರೇಶ್ ಮತ್ತು ಡಾ.ಅಬ್ದುಲ್ ಫರೂಖಿ ನಿರೂಪಿಸಿದರು.