ರಾಗಿ ಬೆಳೆಯು ಉತ್ತಮ ಪೌಷ್ಟಿಕವಾದ ಆಹಾರ ಧಾನ್ಯ

| Published : Sep 15 2024, 01:59 AM IST

ಸಾರಾಂಶ

ರಾಗಿ ಮತ್ತು ಮುಸುಕಿನ ಜೋಳದ ಬೆಳೆಗಳ ವಿಸ್ತೀರ್ಣ ಹೆಚ್ಚಿಸುವಲ್ಲಿ ಗಮನಹರಿಸು

ಕನ್ನಡಪ್ರಭ ವಾರ್ತೆ ಮೈಸೂರುರಾಗಿ ಬೆಳೆಯು ಉತ್ತಮ ಪೌಷ್ಟಿಕವಾದ ಆಹಾರ ಧಾನ್ಯ ಹಾಗೂ ಬಹು ಬೇಡಿಕೆಯ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದರ ಬಳಕೆಯಿಂದಾಗಿ ರಾಗಿಯಲ್ಲಿರುವ ಪೋಷಕಾಂಷಗಳು ಮಧುಮೇಹವನ್ನು ನಿಯಂತ್ರಣದಲ್ಲಿರುವಂತೆ ಮಾಡುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ ಕರೆ ನೀಡಿದರು.ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಗಿ ಮತ್ತು ಮುಸುಕಿನ ಜೋಳ ಬೆಳೆಗಳಲ್ಲಿ ಆಧುನಿಕ ಕೃಷಿ ಪದ್ದತಿಗಳು, ಸೂಕ್ಷ್ಮನೀರಾವರಿ ಅಳವಡಿಕೆ, ರೋಗ ಕೀಟ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಎಂಬ ಮೂರು ದಿನಗಳ ಸಾಂಸ್ಥಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಗಿ ಮತ್ತು ಮುಸುಕಿನ ಜೋಳದ ಬೆಳೆಗಳ ವಿಸ್ತೀರ್ಣ ಹೆಚ್ಚಿಸುವಲ್ಲಿ ಗಮನಹರಿಸುವಂತೆ ತಿಳಿಸುತ್ತಾ ರೈತರು ಸುಸ್ಥಿರ ಮತ್ತು ವೈಜ್ಞಾನಿಕ ತಾಂತ್ರಿಕತೆಗಳನ್ನು ಅನುಸರಿಸಲು ಕರೆ ನೀಡಿದರು.

ರಾಗಿ ಮತ್ತು ಮುಸುಕಿನಜೋಳ: ಮಣ್ಣು, ಬಿತ್ತನೆ ಸಮಯ, ತಳಿ ಆಯ್ಕೆ, ಬಿತ್ತನೆ ತಯಾರಿ, ಬೀಜೋಪಚಾರ, ಸಸಿ ಮಡಿತಯಾರಿಕೆ, ಮಲ್ಚಿಂಗ್, ಅಂತರಬೆಳೆ ಪದ್ದತಿಗಳು, ಕಳೆ ನಿರ್ವಹಣೆ ಕುರಿತು ಸಮಗ್ರ ಮಾಹಿತಿಯನ್ನು ಮಂಡ್ಯ

ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಪಿ. ತಿಮ್ಮೇಗೌಡ ವೈಜ್ಞಾನಿಕ ಮಾಹಿತಿ ಹಂಚಿಕೊಂಡರು.

ರಾಗಿ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಬರುವ ರೋಗಗಳ ಗುರುತಿಸುವಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಮಂಡ್ಯ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ರವೀಂದ್ರ ಮಾಹಿತಿ ನೀಡಿದರು.

ರಾಗಿ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಲಘು ನೀರಾವರಿ ಪದ್ದತಿ ಅಳವಡಿಕೆ, ನೀರಿನ ಬೇಡಿಕೆ, ನೀಡಿಕೆ, ಘಟಕಗಳ ನಿರ್ವಹಣೆ, ಕ್ಷೇತ್ರ ಸಮಸ್ಯೆಗಳು ಪರಿಹಾರಗಳು, ಗುಣ ಮಟ್ಟ ಖಾತರಿ ಪಡಿಸಿಕೊಳ್ಳುವಿಕೆ ಕುರಿತು ಜೈನ್ ಇರಿಗೇಷನ್ ಸಿಸ್ಟಮ್ಸ್ ನ ಬೇಸಾಯ ತಜ್ಞ ಶ್ರೀ ದೇವರಾಜು ತಿಳಿಸಿದರು.

ರೈತ ಉತ್ಪಾದಕ ಸಂಸ್ಥೆಗಳ ಧ್ಯೇಯೊದ್ದೇಶಗಳು ಮತ್ತು ಅನುಷ್ಠಾನದ ಬಗ್ಗೆ ಎಸ್.ಕೆಡಿಆರ್.ಡಿಪಿ, ನಿರ್ದೇಶಕ ದಿನೇಶ್ ಅವರು ಆನ್ಲೈನ್ ಮೂಲಕ ಮಾಹಿತಿ ನೀಡಿದರು.

ಮಂಡ್ಯ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಕಿತ್ತೂರ್ ಮಠ್ ಅವರು ರಾಗಿ ಮತ್ತು ಮುಸುಕಿನಜೋಳ ಬೆಳೆಗಳಲ್ಲಿ ಬರುವ ವಿವಿಧ ಕೀಟಗಳ ಗುರುತಿಸುವಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತಂತೆ ಮಾಹಿತಿ ನೀಡಿ, ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಮೈಸೂರು ತಾಲೂಕು ರಂಗಸಮುದ್ರ ಗ್ರಾಮದ ಪ್ರಗತಿಪರ ರೈತ ರಮೇಶ್ ಅವರು, ರಾಗಿ ಮತ್ತು ಮುಸುಕಿನಜೋಳ ಬೆಳೆಯ ಮಾರುಕಟ್ಟೆ ವ್ಯವಸ್ಥೆ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು. ತರಬೇತಿ ಕಾರ್ಯಕ್ರಮದ ಅಂಗವಾಗಿ ಮೂರನೇ ದಿನದ ಕ್ಷೇತ್ರ ಭೇಟಿಯಲ್ಲಿ ಮಂಡ್ಯ ವಲಯ ಕೃಷಿ ಸಂಶೋಧನಾ ಕೇಂದ್ರಕ್ಕೆ ಕ್ಷೇತ್ರಭೇಟಿ ಕೈಗೊಂಡಿದ್ದು ಕ್ಷೇತ್ರದಲ್ಲಿ ಅಳವಡಿಸಿಕೊಂಡ ಹನಿ ನೀರಾವರಿ ಘಟಕಗಳನ್ನು ವೀಕ್ಷಿಸಿದ್ದು, ರಸಗೊಬ್ಬರಗಳನ್ನು ರಸಾವರಿ ಮೂಲಕ ಕೊಡುವ ಬಗ್ಗೆ, ಸಸ್ಯ ಸಂರಕ್ಷಣೆ, ಬೆಳೆ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಕುರಿತು ವಿಜ್ನಾನಿಗಳು ಅನುಭವ ಹಂಚಿಕೊಂಡರು.

ಸಮಾರೋಪ ಸಮಾರಂಭದಲ್ಲಿ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರೈತರು ತರಬೇತಿಗಳಲ್ಲಿ ಹೆಚ್ಚಾಗಿ ಭಾಗವಹಿಸಿ ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ತರಬೇತಿ ಸಂಯೋಜಕರಾದ ಕೃಷಿ ಅಧಿಕಾರಿ ಎಲ್. ಮಾಲತಿ ತಿಳಿಸಿದರು.