ಸಾರಾಂಶ
ಗದಗ: ವಿಶ್ವ ಮಧುಮೇಹ ದಿನಾಚರಣೆಯನ್ನು ಪ್ರತಿ ವರ್ಷ ನ. 14 ರಂದು ಆಚರಿಸಲಾಗುತ್ತಿದ್ದು, ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹ ಪ್ರಮುಖವಾಗಿದ್ದು, ಮಧುಮೇಹದಿಂದ ಕುರುಡುತನ, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿತ ಕಾಯಿಲೆ, ಪಾರ್ಶ್ವವಾಯು, ಅಂಗವೈಕಲ್ಯತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಹೇಳಿದರು.
ನಗರದ ಮನೋರಮಾ ಕಾಲೇಜಿನಲ್ಲಿ ಗುರುವಾರ ವಿಶ್ವ ಮಧುಮೇಹ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ ಹಾಗೂ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಧುಮೇಹ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಶ್ವ ಮಧುಮೇಹ ದಿನಾಚರಣೆಯ ಈ ವರ್ಷದ ಘೋಷವಾಕ್ಯೆ ಮಧುಮೇಹ ಮತ್ತು ಯೋಗಕ್ಷೇಮ ಅಂದರೆ ಮಧುಮೇಹ ರೋಗದ ಕುರಿತು ಆರೋಗ್ಯ ಶಿಕ್ಷಣ ಸಾರ್ವಜನಿಕರಿಗೆ ನೀಡಿದಲ್ಲಿ ಮಧುಮೇಹ ಕಾಯಿಲೆ, ಮಧುಮೇಹದ ತೀವ್ರತೆ ಮತ್ತು ಮಧುಮೇಹದಿಂದಾಗುವ ಆರೋಗ್ಯ ಸಮಸ್ಯೆ ಕಡಿಮೆ ಮಾಡಬಹುದು ಹಾಗೂ ತಡೆಗಟ್ಟಬಹುದು ಎಂದರು.
ವರ್ಷದಲ್ಲಿ ಸರಿ ಸುಮಾರು 6 ಕೋಟಿ ಜನರು ಮರಣ ಹೊಂದುತ್ತಿದ್ದು, ಇವರಲ್ಲಿ 4 ಕೋಟಿ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದಲೇ ಮರಣ ಹೊಂದುತ್ತಿದ್ದಾರೆ, ಅದೇ ರೀತಿ ಭಾರತದಲ್ಲಿ ವರ್ಷದಲ್ಲಿ ಸರಿಸುಮಾರು 1 ಕೋಟಿ ಮರಣ ಹೊಂದುತ್ತಿದ್ದು, ಇವರಲ್ಲಿ 67 ಲಕ್ಷ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ದೇಶದಲ್ಲಿ ಸುಮಾರು 7.7 ಕೋಟಿ ಜನರು ಮಧು ಮೇಹದಿಂದ ಬಳಲುತ್ತಿದ್ದಾರೆ. ಇಂಟರ್‌ನ್ಯಾಶನಲ್ ಡಯಾಬೀಟಿಸ್ ಫೇಡರೇಶನ್ ಸಂಸ್ಥೆಯು ಭಾರತದಲ್ಲಿ 2045ಕ್ಕೆ ಸೂಮಾರು 13.4 ಕೋಟಿ ಮಧುಮೇಹದಿಂದ ಬಳಲುವವರ ಸಂಖ್ಯೆ ಹೆಚ್ಚಾಗಬಹುದೆಂದು ಅಂದಾಜಿಸಿದ್ದಾರೆ. ಮಧುಮೇಹದ ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳಾದ ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ, ತಂಬಾಕು ಬಳಕೆ, ಮದ್ಯಪಾನ ಸೇವನೆ ಹಾಗೂ ಮಾನಸಿಕ ಒತ್ತಡದಿಂದ ಮಧುಮೇಹ ರೋಗಿಗಳ ಮತ್ತು ಅಸಾಂಕ್ರಾಮಿಕ ರೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಸಂಯೋಜಕ ಡಾ.ರವಿ ಕಡಗಾವಿ ಮಾತನಾಡಿ, ಬಹಳಷ್ಟು ಜನರಿಗೆ ಮಧುಮೇಹದ ಬಗ್ಗೆ ಅರಿವು ಇರದಿರುವುದರಿಂದ 30 ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಕನಿಷ್ಠ ಒಂದು ಬಾರಿ ಕಡ್ಡಾಯವಾಗಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಅಸಾಂಕ್ರಾಮಿಕ ರೋಗ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಮುಂದೆ ಆಗಬಹುದಾದ ತೊಂದರೆ ತಡೆಗಟ್ಟಬಹುದು. ನಾವು ಆರೋಗ್ಯವಾಗಿರಲು ನಮ್ಮ ಜೀವನ ಶೈಲಿ ಬದಲಾಯಿಸಿಕೊಂಡು ನಿಯಮಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್.ಸಿ.ಡಿ. ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2025 ರ ಒಳಗಾಗಿ ಸುಮಾರು 25% ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿ ಹೊಂದಿದೆ ಎಂದು ತಿಳಿಸಿದರು.ಮನೋರಮಾ ಕಾಲೇಜು ಪ್ರಾಂಶುಪಾಲ ಬಿ.ಎಸ್. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಪ್ರವೀಣ ನಿಡಗುಂದಿ, ಗೋಪಾಲ ಸುರಪುರ, ಕಿಶೋರ ಮುದಗಲ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಆಡಳಿತ ವರ್ಗ, ವಿದ್ಯಾರ್ಥಿಗಳು ಇದ್ದರು. ಮುತ್ತನಗೌಡ ಸಿ.ರಬ್ಬನಗೌಡ ನಿರೂಪಿಸಿ, ವಂದಿಸಿದರು.