ಅಳಿವಂಚಿನಲ್ಲಿರುವ ಪ್ರಾಚೀನ ದೇವಾಲಯಗಳನ್ನು ಉಳಿಸಿಕೊಳ್ಳಬೇಕು

| Published : Mar 17 2025, 12:35 AM IST

ಸಾರಾಂಶ

ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ಗ್ರಂಥಗಳ ಅಧ್ಯಯನದಿಂದ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳ ಅಧ್ಯಯನ ಸುಲಭವಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಚರಿತ್ರೆಯನ್ನು ಸಾರುವ ಅತ್ಯಂತ ಸುಂದರವಾದ ಕಲಾಕೃತಿ ಮತ್ತು ವಾಸ್ತುಶಿಲ್ಪಗಳನ್ನು ಒಳಗೊಂಡಿರುವ ಸಾಕಷ್ಟು ಪ್ರಾಚೀನ ದೇವಾಲಯಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರು ಮತ್ತು ಸರ್ಕಾರದ ಮೇಲಿದೆ ಎಂದು ದೇವಾಲಯಗಳ ವಾಸ್ತುತಜ್ಞ ಎಂ.ಎನ್. ಪ್ರಭಾಕರ್ ತಿಳಿಸಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್‌ ಗ್ಯಾಲರಿಯು ಭಾನುವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ 101 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ಗ್ರಂಥಗಳ ಅಧ್ಯಯನದಿಂದ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳ ಅಧ್ಯಯನ ಸುಲಭವಾಗುತ್ತದೆ. ವಾಸ್ತುಶಿಲ್ಪಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ಮಾಡಲು ಆಸಕ್ತಿ ಇರುವವರು ಮೊದಲು ವಾಸ್ತುಶಿಲ್ಪ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.

ಕರ್ನಾಟಕದ ದೇವಾಲಯಗಳ ವಾಸ್ತುಶಿಲ್ಪ ಶೈಲಿಗಳು ಬೇರೆ ರಾಜ್ಯಗಳ ದೇವಾಲಯಗಳ ಶೈಲಿಗಳ ಪ್ರಭಾವಕ್ಕೆ ಒಳಗಾದವುಗಳಲ್ಲ. ಬದಲಿಗೆ ಕರ್ನಾಟಕದ ಪ್ರಾಚೀನ ದೇವಾಲಯಗಳ ವಾಸ್ತುಶಿಲ್ಪ ಶೈಲಿಗಳು ಕರ್ನಾಟಕದಲ್ಲಿಯೇ ಆರಂಭಗೊಂಡ ಮಾದರಿಗಳಾಗಿವೆ. ಇವುಗಳು ಕರ್ನಾಟಕದಲ್ಲಿ ಬೆಳೆದು ಆ ನಂತರ ಬೇರೆ ರಾಜ್ಯಗಳ ದೇವಾಲಯಗಳ ಮೇಲೂ ಪ್ರಭಾವ ಬೀರಿವೆ ಎಂದರು.

ದಕ್ಷಿಣಾತ್ಯ, ಔತ್ತರೇಯ ಇತ್ಯಾದಿ ಶೈಲಿಗಳು ಕರ್ನಾಟಕದ ದೇವಾಲಯಗಳ ಅತ್ಯಂತ ಪ್ರಾಚೀನ ಮಾದರಿಗಳಾಗಿವೆ. ಕಾಳಿಂಗ, ನಾಗರ, ದ್ರಾವಿಡ, ವೇಸರ ಸೇರಿದಂತೆ ಎಲ್ಲಾ ಶೈಲಿಯ ವೈವಿದ್ಯತೆಯನ್ನೂ ಒಳಗೊಂಡಿರುವ ದೇವಾಲಯಗಳು ಕರ್ನಾಟಕದಲ್ಲಿವೆ ಎಂದು ಅವರು ತಿಳಿಸಿದರು.

ಇತಿಹಾಸ ನಿವೃತ್ತ ಉಪನ್ಯಾಸಕ ಲ.ನ. ಸ್ವಾಮಿ ಮಾತನಾಡಿ, ಕಾವೇರಿ, ಕಪಿಲಾ, ತುಂಗಭದ್ರಾ ನದಿಗಳ ತೀರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಚೀನ ದೇವಾಲಯಗಳು ಸಿಗುತ್ತವೆ. ಇದುವರೆಗಿನ ಅನುಭವ ಮತ್ತು ಇತ್ತೀಚಿನ ವರ್ಷಗಳಲ್ಲಿನ ತಂತ್ರಜ್ಞಾನದ ನೆರವಿನಿಂದ ದೇವಾಲಯಗಳ ಉತ್ಖನನ ಮಾಡಿದರೆ ಕರ್ನಾಟಕದ ಸಾಕಷ್ಟು ಪ್ರಾಚೀನ ದೇವಾಲಯಗಳು ಮತ್ತು ಅವುಗಳಲ್ಲಿನ ಶಿಲೆಯ ಕಲೆಯನ್ನು ಬೆಳಕಿಗೆ ತರಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಆರ್ಟ್‌ ಗ್ಯಾಲರಿ ಅಧ್ಯಕ್ಷ ಎಲ್. ಶಿವಲಿಂಗಪ್ಪ ಮಾತನಾಡಿ, ದೇವಾಲಯಗಳ ಶಾಸನಗಳಲ್ಲಿ ಆಯಾ ಕಾಲದ ರಾಜರ ಹೆಸರನ್ನು ಮಾತ್ರ ನಮೂದಿಸಲಾಗಿದೆ. ಆದರೆ, ದೇವಾಲಯಗಳ ಶಿಲ್ಪಗಳನ್ನು ಕೆತ್ತಿದ, ವಾಸ್ತುಶಿಲ್ಪ ಶೈಲಿಗಳನ್ನು ರೂಪಿಸಿದ ಎಷ್ಟೋ ಶಿಲ್ಪಿಗಳು, ಕುಶಲಕರ್ಮಿಗಳು ತಾವು ರೂಪಿಸಿದ ಶಿಲ್ಪಕಲೆಗಳಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಲ್ಲ. ಹೀಗಾಗಿ, ಆಯಾ ಕಾಲದಲ್ಲಿ ಜೀವಿಸಿದ್ದ ಶಿಲ್ಪ ಕಲಾವಿದರು ಯಾರೆಂಬುದೇ ಚರಿತ್ರೆಯಲ್ಲಿ ದಾಖಲಾಗಿಲ್ಲ. ಜೊತೆಗೆ ಪ್ರಾಚೀನ ಕಾಲದ ಶಿಲ್ಪಿಗಳನ್ನು, ಕಲಾವಿದರ ಚರಿತ್ರೆಯನ್ನು ದಾಖಲಿಸುವ ಕೆಲಸವೂ ಸಮರ್ಪಕವಾಗಿ ಆಗಿಲ್ಲ ಎಂದು ವಿಷಾದಿಸಿದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಗಮಕಿ ಜಿ.ಎನ್. ಪದ್ಮಾ, ವಿಶ್ರಾಂತ ಪ್ರಾಧ್ಯಾಪಕಿ. ಉಷಾರಾಣಿ, ಮೈಸೂರು ಆರ್ಟ್‌ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ, ಪ್ರಧಾನ ಸಂಚಾಲಕ ಶ್ರೀಕಂಠಮೂರ್ತಿ, ಸಂಚಾಲಕರಾದ ಮನೋಹರ್, ಮೋಹನಾ, ಶೋಭಾರಾಣಿ, ಗೋವಿಂದಾಚಾರ್, ಬ್ರಹ್ಮಸೂರಯ್ಯ ಮೊದಲಾದವರು ಇದ್ದರು.