ಸಾರಾಂಶ
ದೊಡ್ಡಬಳ್ಳಾಪುರ: ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರ ಕೊಡಲಾಗದ ಕೇಂದ್ರ ಸರ್ಕಾರ ಸಂಸದರನ್ನು ಅಮಾನತು ಮಾಡಿರುವುದು ಸರಿಯಲ್ಲ. 146 ಸಂಸದರನ್ನು ಅಮಾನತು ಮಾಡಿ ಬಿಲ್‌ಗಳನ್ನು ಪಾಸ್ ಮಾಡಿರುವುದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಸಿಪಿಎಂ ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ ಆರೋಪಿಸಿದರು.
ಸಂಸದರ ಅಮಾನತು ಪ್ರಕರಣ ಹಾಗೂ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆ ಖಂಡಿಸಿ ನಗರದ ಡಾ.ಬಿಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಖಂಡಿಸಿ ಅಥ್ಲೆಟಿಕ್ ಸಾಕ್ಷಿಮಲ್ಲಿಕ್ ತಮ್ಮ ಬೂಟನ್ನು ಕಳಚಿಟ್ಟು ಪ್ರತಿಭಟನೆ ಮಾಡಿ ನಿವೃತ್ತಿ ಘೋಷಿಸಿದ್ದಾರೆ. ಹಲವರು ಪದ್ಮಶ್ರೀ ವಾಪಸ್ ಮಾಡಿದ್ದಾರೆ. ಬಿಜೆಪಿ ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕುಗಳನ್ನು ಮೊಟಕುಗೊಳಿಸಿ, ವೇದಗಳ ಕಾಲದ ಆಡಳಿತ ಜಾರಿಗೆ ಹುನ್ನಾರ ಮಾಡುತ್ತಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವ್ನೇ ಹೊಸಕಿಹಾಕುತ್ತಾರೆ ಎಂದು ಆರೋಪಿಸಿದರು.ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿ, ಪಾರ್ಲಿಮೆಂಟ್ ದೇಹವಾದರೆ ಸಂವಿಧಾನವು ಅದರ ಆತ್ಮವಿದ್ದಂತೆ, ಇಂತಹ ಪಾರ್ಲಿಮೆಂಟ್ ಮೇಲೆ ದಾಳಿ ನಡೆದಿರುವುದು ಖಂಡನೀಯ. ಅಪೌಷ್ಠಿಕತೆ ನಿವಾರಣೆಯಲ್ಲಿ ಭಾರತ ತೀರಾ ಹಿಂದುಳಿದಿದೆ. ನಗರ ಪ್ರದೇಶದ ಶೇ 40, ಗ್ರಾಮಾಂತರದಲ್ಲಿ ಶೇ 69 ರಷ್ಟು ಮಕ್ಕಳು ಮತ್ತು ಗರ್ಭಿಣಿಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿದೆ. ಕುಟುಂಬಕ್ಕೆ ಬದುಕಲು ಬೇಕಾದ ಸಮತೋಲಿತ ಆಹಾರ ಬೇಕು. ಇಂತಹ ಜನರ ಮೂಲಭೂತ ಹಕ್ಕುಗಳ ಬಗ್ಗೆ ಕಾನೂನು ಮಾಡಬೇಕಾದ ಸಂಸದರನ್ನೇ ವಜಾ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಗೃಹಮಂತ್ರಿ ಅಮಿತ್ ಶಾ ಭದ್ರತಾಲೋಪದ ಕುರಿತು ಸೊಲ್ಲೆತ್ತಿಲ್ಲ. ಸಂಸದರು, ಅಮಿತ್ ಶಾ ಮತ್ತು ಮೋದಿ ಹೇಳಿದ್ದನ್ನು ಕೇಳಿಸಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಸಂಸತ್ತಿನಲ್ಲಿ ಯಾವುದೇ ಚರ್ಚೆಗಳಿಲ್ಲದೆ ಮಸೂದೆಗಳು ಅಂಗೀಕಾರ ಮಾಡಲಾಗುತ್ತಿದೆ. ಆಡಳಿತ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ, ದಲಿತ, ರೈತ, ಕಾರ್ಮಿಕ ಹಾಗೂ ಬಡವರ ವಿರೋಧಿ ಕಾನೂನು ತರುತ್ತಿದೆ. ವಿರೋಧ ಪಕ್ಷಗಳಿಗೆ ಕನಿಷ್ಠ ಗೌರವ ಕೊಡುತ್ತಿಲ್ಲ. ಲಕ್ಷಾಂತರ ಜನರ ಮತ ಪಡೆದು ಬಂದವರಿಗೆ ಅವಮಾನ ಮಾಡಿ ದೊಡ್ಡ ಸಂಖ್ಯೆಯ ಸಂಸದರನ್ನು ಹೊರಗೆ ಹಾಕಿರುವುದು ಇದೇ ಮೊದಲು. ವಿರೋಧ ಪಕ್ಷ ಮುಕ್ತ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಪಿ.ಎ.ವೆಂಕಟೇಶ್, ಮುಖಂಡರಾದ ರಘು, ಚೌಡಯ್ಯ, ಮನಿಷಾ. ಮುಂತಾದವರು ಉಪಸ್ಥಿತರಿದ್ದರು.26ಕೆಡಿಬಿಪಿ12-ಸಂಸತ್ ಸದಸ್ಯರ ಅಮಾನತು ಹಾಗೂ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಡೆ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.