ಖರ್ಗೆ ಪುತ್ರನಿಗೆ ಕೆಐಎಡಿಬಿ ಜಾಗವೇ ಬೇಕಿತ್ತಾ?: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

| Published : Aug 29 2024, 12:57 AM IST / Updated: Aug 29 2024, 11:29 AM IST

ಸಾರಾಂಶ

ಚರ್ಚೆ ಮಾಡಲು ಬಹಳ ವಿಚಾರಗಳು ಇವೆ. ಪಾಪ ನಮ್ಮನ್ನ ಕೆಣಕಿದ್ದಾರೆ. ನಿನ್ನೆ ಅಸಲಿ- ನಕಲಿ ಎಂದೆಲ್ಲಾ ಹೇಳಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿನೋಟಿಫಿಷನ್ ಮಾಡಿಕೊಂಡು ಜೀವನ ಮಾಡುವವರು ಇವರು, ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?

 ಮಂಡ್ಯ :  ಖರ್ಗೆ ದೇಶಕ್ಕೆಲ್ಲಾ ಬುದ್ಧಿ ಹೇಳುತ್ತಾರೆ. ಆ ರೀತಿ ಉಪದೇಶ ಮಾಡುವವರಿಗೆ ಕೆಐಎಡಿಬಿ ಜಾಗವೇ ಬೇಕಿತ್ತಾ? ದುಡ್ಡು ಕೊಟ್ಟು ಖಾಸಗಿ ಜಮೀನು ಖರೀದಿಸಬಹುದಾಗಿತ್ತು. ಇದು ಅಧಿಕಾರ ದುರುಪಯೋಗವಲ್ಲದೆ ಮತ್ತೇನು? ದೇಶಕ್ಕೆ ಉತ್ತರ ಹೇಳುವವರು ಇದಕ್ಕೆ ಉತ್ತರ ನೀಡಬೇಕು ಎಂದು ಸಂಸದ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಹೇಳಿದರು.

ಖರ್ಗೆ ಪುತ್ರನಿಗೆ ಜಮೀನು ನೀಡಿರುವ ವಿಚಾರ:

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೀಗೆ ಯಾರೋ ಒಬ್ಬರಿಗಲ್ಲ. ಹಲವಾರು ಜನರಿಗೆ ಕೊಟ್ಟಿದ್ದಾರೆ, ಬೇಕಾದಷ್ಟು ಇಂತಹ ಪ್ರಕರಣಗಳು ನಡೆದಿವೆ. ಇದೆಲ್ಲಾ ಅಕ್ರಮ ಎನ್ನುವುದು ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇ ಎಂದು ಟೀಕಿಸಿದರು.

ಕಾಂಗ್ರೆಸ್‌ನವರು ರಾಜಭವನ ಚಲೋ ನಡೆಸುವ ಬಗ್ಗೆ ಕೇಳಿದಾಗ, ಬಹಳ ಸಂತೋಷ, ರಾಜಭವನದ ಜೊತೆಗೆ ರಾಷ್ಟ್ರಪತಿ ಭವನ ಚಲೋ ಕೂಡ ಮಾಡಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೂ ಹೋಗಲಿ. ಸತ್ತಿರುವ ವಿಚಾರ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನ್ ಅಪರಾಧ ಮಾಡಿದ್ದೇನೆ ಎನ್ನುತ್ತಿದ್ದಾರೆ. ನಾನೇ ಕೈ ಜೋಡಿಸಿ ಮನವಿ ಮಾಡುತ್ತೇನೆ. ಎಲ್ಲ ಅನುಮತಿ ಪಡೆದು ತನಿಖೆ ಮಾಡಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಕುರಿತಂತೆ ಡಿ.ಕೆ.ಶಿವಕುಮಾರ್ ಆಡಿರುವ ಮಾತುಗಳ ಬಗ್ಗೆ ಪ್ರಶ್ನಿಸಿದಾಗ, ಚರ್ಚೆ ಮಾಡಲು ಬಹಳ ವಿಚಾರಗಳು ಇವೆ. ಪಾಪ ನಮ್ಮನ್ನ ಕೆಣಕಿದ್ದಾರೆ. ನಿನ್ನೆ ಅಸಲಿ- ನಕಲಿ ಎಂದೆಲ್ಲಾ ಹೇಳಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸತ್ತವರ ಹೆಸರಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ಡಿನೋಟಿಫಿಷನ್ ಮಾಡಿಕೊಂಡು ಜೀವನ ಮಾಡುವವರು ಇವರು, ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಕಿಡಿಕಾರಿದರು.

ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬೇಲೂರು ಶಶಿಧರ್ ಇತರರಿದ್ದರು.