ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗದ ಹೃದಯ ಭಾಗದಲ್ಲಿರುವ ಗೊಲ್ಲರ ಹಾಸ್ಟೆಲ್ ನೆಲಸಮಗೊಳಿಸಿ ಅಲ್ಲೊಂದು ಸಮುದಾಯ ಭವನ ನಿರ್ಮಾಣಕ್ಕೆ ಮಂದಾಗಿರುವ ಗೊಲ್ಲರ ಸಂಘದ ಪದಾಧಿಕಾರಿಗಳು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಅಪವ್ಯಯ ಮಾಡಿರುವುದು ಮೇಲು ನೋಟಕ್ಕೆ ಸ್ಪಷ್ಟವಾದಂತೆ ಕಾಣಿಸುತ್ತಿದೆ. ಈ ಸಂಬಂಧ ತಹಸೀಲ್ದಾರರು ಸ್ಥಳ ತನಿಖೆ ನಡೆಸಿ ನೀಡಿರುವ ಪರಿಶೀಲನಾ ವರದಿ ಬೆಚ್ಚಿ ಬೀಳಿಸುವಂತಿದ್ದು ಎಂಪಿ ಫಂಡ್ ಬಳಕೆಗೆ ಹೀಗೂ ಅಡ್ಡದಾರಿಗಳಿವೆಯಾ ಎಂಬ ಸಂದೇಹ ಮೂಡಿಸಿದೆ.
ಯಾದವ ಸಂಘದ ಮುಖಂಡ ಚಂದ್ರಶೇಖರ್ ಎಂಬುವರು ಕಳೆದ ಡಿಸೆಂಬರ್ 24 (17-12-2024) ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಯಾದವ ಸಂಘದಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಹಿಂದಿನ ಸಂಸದರಾದ ಎ.ನಾರಾಯಣಸ್ವಾಮಿ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರು. ಮಂಜೂರು ಮಾಡಿದ್ದಾರೆ. ಕಾಮಗಾರಿಯನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಯ ಈ ಹಂತದ ಪರಿಶೀಲನಾ ವರದಿ ನೀಡುವಂತೆ ಮನವಿ ಮಾಡಿದ್ದರು.ಮನವಿ ಅನುಸಾರ ಜಿಲ್ಲಾಧಿಕಾರಿಗಳು ಚಿತ್ರದುರ್ಗ ತಹಸೀಲ್ದಾರರಿಗೆ ಸೂಚನೆ ನೀಡಿ ಸಮುದಾಯ ಭವನ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಪರಿಶೀಲನಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದರು. ಪರಿಶೀಲನಾ ವರದಿ ಪಡೆಯಲು ಚಿತ್ರದುರ್ಗ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ನಿಯೋಜನೆ ಮಾಡಿದ ತಹಸೀಲ್ದಾರರು ಜರೂರು ಎಂಬುದ ನೆನಪು ಮಾಡಿದ್ದರು.
ಡಿಸೆಂಬರ್ 21, 2024 ರಂದು ಮಧ್ಯಾಹ್ನ 12ರ ಉರಿ ಬಿಸಿಲಲ್ಲಿ ಕಾಮಗಾರಿ ಸ್ಥಳಕ್ಕೆ ರಾಜಸ್ವ ನಿರೀಕ್ಷಕರ ತಂಡ ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು. 50 ಲಕ್ಷ ರು. ಎಂಪಿ ಫಂಡ್ ವ್ಯಯ ಮಾಡಲಾಗಿದ್ದರೂ ಅಲ್ಲಿ ಯಾವ ಕಟ್ಟಡಗಳೂ ಕಾಣಿಸಲಿಲ್ಲ. ಜಿಪಿಎಸ್ ಆಧಾರಿತ ಸ್ಥಳ ತನಿಖೆ ಮಾಡಿದರು. ಉದ್ದೇಶಿತ ಸಮುದಾಯ ಭವನ ನಿರ್ಮಾಣದ ಪ್ರತಿ ಮೂಲೆಯಲ್ಲಿ ನಿಂತು ಪೋಟೋ ಕ್ಲಿಕ್ಕಿಸಿಕೊಂಡರು. ಕಣ್ಣಾರೆ ಕಂಡ ವಾಸ್ತವಾಂಶ ದಾಖಲು ಮಾಡಿದರು. ಪೂರ್ವ ದಿಕ್ಕಿನಲ್ಲಿ ಸುಮಾರು 50 ಅಡಿ ಹಾಗೂ 4 ರಿಂದ 5 ಅಡಿ ಎತ್ತರದ ಸೈಡ್ ಕಾಂಕ್ರಿಟ್ ಬುನಾದಿ ನಿರ್ಮಾಣದ ಹಂತದಲ್ಲಿದ್ದು ಯಾವುದೇ ಕಟ್ಟಡ ನಿರ್ಮಾಣಗೊಂಡಿಲ್ಲವೆಂಬ ಷರಾ ಬರೆದರು.ರಾಜಸ್ವ ನಿರೀಕ್ಷಕರ ತಂಡ ನೀಡಿದ ಪರಿಶೀಲನಾ ವರದಿಯನ್ನು ತಹಸೀಲ್ದಾರರು ಡಿಸೆಂಬರ್ 30, 2024 ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ ಮೂರು ತಿಂಗಳಾದರೂ ಕಾಮಗಾರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪರಿಶೀಲನಾ ತಂಡ ಬಂದು ಹೋದ ನಂತರವಾದರೂ ಎಚ್ಚೆತ್ತುಕೊಂಡು ಕಾಮಗಾರಿಗೆ ಚುರುಕಿನ ವೇಗ ನೀಡಬಹುದಿತ್ತು. ಆದರೆ ಅದು ಸಾಧ್ಯವಾಗದೇ ಹೋಗಿದೆ. ಅದೇ ಮೋಟು ಗೋಡೆ, ಒಂದಿಷ್ಟು ಕಬ್ಬಿಣದ ರಾಡುಗಳು ಬಿಟ್ಟರೆ ಅಲ್ಲಿ ಬೇರೆ ಏನೂ ಇಲ್ಲ. ಎಂಪಿ ಫಂಡ್ ಸ್ವಾಹ ಮಾಡಲು ಸಂಘಟಿತ ಯತ್ನಗಳು ನಡೆದಿರುವ ಸಾಧ್ಯತೆಗಳು ಪ್ರಧಾನವಾಗಿ ಬಿಂಬಿತವಾಗಿವೆ.
ಸಮುದಾಯ ಭವನ ನಿರ್ಮಾಣದ ಜವಾಬ್ದಾರಿಯನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಜಿಲ್ಲಾಧಿಕಾರಿಗಳೇ ಎರಡು ಹಂತದಲ್ಲಿ ತಲಾ 25 ಲಕ್ಷ ರು. ನಂತೆ ನಿರ್ಮಿತಿ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಏನಾಗಿದೆ, ಯಾವ ಹಂತದಲ್ಲಿದೆ ಎಂದು ಪರಿಶೀಲಿಸುವ ಉಸಾಬರಿಗೆ ಹೋಗದೆ ಇರುವುದು ಎಂಪಿ ಫಂಡ್ ಅನುದಾನ ಬಳಕೆ ಅದ್ವಾನ ಹಂತ ತಲುಪಿದಂತಾಗಿದೆ. ಬಿಸಿಲಿಗೆ ಜಲಾಶಯದ ನೀರು ಆವಿಯಾಗುವಂತೆ ಎಂಪಿ ಫಂಡ್ ಕೂಡಾ ಕರಗಿ ಹೋಯ್ತಾ ಎಂಬ ಸಂದೇಹ ಇಮ್ಮಡಿಯಾಗಿದೆ. ಇದು ಕೇವಲ ಎ.ನಾರಾಯಣಸ್ವಾಮಿ ಅವರ ಅನುದಾನ. ಉಳಿದಂತೆ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರ 20 ಲಕ್ಷ ಹಾಗೂ ವಿಪ ಸದಸ್ಯಕೆ.ಎಸ್.ನವೀನ್ ನೀಡಿದ 10 ಲಕ್ಷ ರು. ಅನುದಾನ ಎಲ್ಲಿ ಕರಗಿದೆ ಸಂಗತಿ ಬೆಳಕಿಗೆ ಬರಬೇಕಿದೆ.