ಶಿವಕುಮಾರ ಕುಷ್ಟಗಿ
ಗದಗ: ರಸ್ತೆ, ಫುಟ್‌ಪಾತ್, ಉದ್ಯಾನ ಹಾಗೂ ಹಳ್ಳಗಳ ಇಕ್ಕೆಲ ಸಾರ್ವಜನಿಕ ಬಳಕೆ ಜಾಗಗಳನ್ನು ಅತಿಕ್ರಮಿಸುವುದು ನಗರದಲ್ಲಿ ಸಾಮಾನ್ಯವಾಗುತ್ತಿದೆ. ಈ ನಡುವೆ ಸರ್ಕಾರಿ ರಸ್ತೆಯನ್ನೇ ಸಂಪೂರ್ಣ ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. 1985ರಲ್ಲಿ ನಿರ್ಮಾಣವಾದ ಗದುಗಿನ ನಾಗಲಿಂಗ ನಗರದ ಮಾನ್ವಿ ಲೇಔಟ್‌ನಲ್ಲಿ ಸುಮಾರು 1600 ಚದರ ಅಡಿ ರಸ್ತೆ ಜಾಗೆಯನ್ನು ಪ್ರಭಾವಿಗಳು ಅತಿಕ್ರಮಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಅಧಿಕೃತ ನಕ್ಷೆಯಲ್ಲಿ ರಸ್ತೆ ಗುರುತಿಸಲ್ಪಟ್ಟಿದ್ದರೂ ವಾಸ್ತವದಲ್ಲಿ ರಸ್ತೆಯೇ ಕಾಣೆಯಾಗಿದೆ. ಇದರಿಂದ ಹಿಂಭಾಗದ ನಿವಾಸಿಗಳು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಲೋಕಾಕ್ಕೆ ದೂರು: ಈ ವಿಷಯವಾಗಿ ನಾಗಲಿಂಗ ನಗರದ ನಿವಾಸಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ರಸ್ತೆ ಜಾಗದ ಸರ್ವೇ ಮಾಡಲು ನಗರಸಭೆಗೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಅಧಿಕಾರಿಗಳು ಮೋಜಣಿ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲೂ ದೂರು ನೀಡಿದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.1985ರಲ್ಲಿ ರಸ್ತೆಗಾಗಿ ಮೀಸಲಾದ ಜಾಗವನ್ನು 2019- 20ರಲ್ಲಿ ದಾನಪತ್ರದ ಮೂಲಕ ನಗರಸಭೆಗೆ ನೀಡಲಾಗಿದೆ ಎಂಬ ದಾಖಲೆ ಸೃಷ್ಟಿಸಲಾಗಿದ್ದು. ಈಗಾಗಲೇ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಾಗವನ್ನು ಮತ್ತೆ ದಾನವಾಗಿ ಸ್ವೀಕರಿಸಿರುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.ಯಾರೂ ಗಮನಿಸುತ್ತಿಲ್ಲ: ಸಂತೋಷ ವಿಶ್ವಕರ್ಮ ಎಂಬವರು ಕೂಡಾ 15 ವರ್ಷಗಳ ಹಿಂದೆ ಖರೀದಿಸಿದ ಪ್ಲಾಟ್ ನಂ. 31/ಎ ಮತ್ತು 30/ಎ ನಿವೇಶನವನ್ನು ಕೂಡ ಅತಿಕ್ರಮಿಸಲಾಗಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ನಗರಸಭೆ, ಭೂದಾಖಲೆ ಇಲಾಖೆ ಹಾಗೂ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಯಾರೂ ಗಮನಿಸುತ್ತಿಲ್ಲ ಎನ್ನುವುದು ಅವರ ಆರೋಪ.
ಕ್ರಿಮಿನಲ್ ಕೇಸ್: ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಭಾವಿಗಳ ರಕ್ಷಣೆಯಿಂದಲೇ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವಾಗುತ್ತಿಲ್ಲ. ನಮಗೆ ಒತ್ತಡವಿದೆ ಎಂದು ಹಲವಾರು ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಯಾವುದೇ ತಪ್ಪು ಮಾಡದ, ಏನೂ ಅರಿಯದ ಜನರಿಗೆ ಈ ರೀತಿ ನಿರಂತರ ತೊಂದರೆಯಾದರೆ ಯಾರ ಬಳಿ ನಮ್ಮ ಸಮಸ್ಯೆ ಹೇಳುವುದು ಎನ್ನುವುದೇ ತಿಳಿಯದಾಗಿದೆ ಎಂದು ತೊಂದರೆಗೊಳಗಾದ ವ್ಯಕ್ತಿ ಶಿವಕುಮಾರ ಅಣ್ಣಿಗೇರಿ ತಿಳಿಸಿದರು.ಮತ್ತೆ ಸರ್ವೇ: ಅತಿಕ್ರಮಣದ ಬಗ್ಗೆ ದೂರು ಬಂದಿದೆ. ಈ ಹಿಂದಿನ ಸರ್ವೇ ವರದಿಯಲ್ಲಿ ಅತಿಕ್ರಮಣ ಇಲ್ಲ ಎಂದು ತಿಳಿಸಲಾಗಿದೆ. ಈಗ ಮತ್ತೆ ಸರ್ವೇ ನಡೆಸಿ ವರದಿಯನ್ನು ಲೋಕಾಯುಕ್ತಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಆಯುಕ್ತ ರಾಜಾರಾಮ ಪವಾರ ತಿಳಿಸಿದರು.