ಸಾರಾಂಶ
ಹುಬ್ಬಳ್ಳಿ: ರಾಜ್ಯದಲ್ಲಿ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದು ಸಮಾಜದವರಲ್ಲಿ ಒಗ್ಗಟ್ಟಿನ ಕೊರತೆ ಇರುವುದನ್ನು ತೋರಿಸುತ್ತದೆ. ಇನ್ನಾದರೂ ಸಮಾಜ ಬಾಂಧವರು ಒಗ್ಗೂಡಬೇಕು ಎಂದು ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಛಲವಾದಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸುವರ್ಣ ಸಂವತ್ಸರ ಪೂರೈಸಿದ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಮಾಜದ ಬಗ್ಗೆ ಕಾಳಜಿಯಿರಬೇಕು. ಸಮಾಜದ ಕೆಲಸ ಬಂದಾಗ ಒಗ್ಗೂಡಿಕೊಂಡು ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಮಯ ಮಾಡಿಕೊಂಡು ಸಮಾಜದವರು ಒಗ್ಗೂಡಿಕೊಂಡು ಸಮಾಜದ ಏಳ್ಗೆ ಬಗ್ಗೆ ಚಿಂತನೆ ನಡೆಸಬೇಕು. ಸಮಾಜದಿಂದ ಸಾಕಷ್ಟು ಪಡೆದುಕೊಂಡಿದ್ದೇವೆ. ಇದರ ಋಣವನ್ನು ತೀರಿಸುವ ಕೆಲಸ ಆಗಬೇಕು. ಇತರ ಸಮಾಜಕ್ಕೆ ಯಾವುದೇ ಕಡಿಮೆಯಿಲ್ಲದಂತೆ ಬೆಳೆಯಬೇಕು. ನಾಯಕರು, ಅಧಿಕಾರಿಗಳಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕು. ಇನ್ನೊಬ್ಬರನ್ನು ದೂಷಿಸುವ ಬದಲು ನಮ್ಮ ಬೆಳವಣಿಗೆ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಮೀಸಲಾತಿ ರದ್ಧತಿಯ ಹುನ್ನಾರನಮ್ಮ ಮೀಸಲಾತಿಯನ್ನು ರದ್ದುಗೊಳಿಸುವ ಹುನ್ನಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ವಿರೋಧಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು. ಹಿಂದೆ ದಲಿತರ ದೊಡ್ಡ ಶಕ್ತಿಯಿತ್ತು. ಆದರೆ, ಇಂದು ಅಂತಹ ಪರಿಸ್ಥಿತಿ ಉಳಿದಿಲ್ಲ. ಸಾಕಷ್ಟು ಪಂಗಡಗಳನ್ನಾಗಿ ಒಡೆದು ಹಾಕಿದ್ದಾರೆ. ನಮ್ಮವರೇ ನಮಗೆ ವಿರೋಧ ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಇಂದು ನಾವು ಒಗ್ಗೂಡದಿದ್ದರೆ ಮೀಸಲಾತಿಯಿಂದ ನಮ್ಮ ಮುಂದಿನ ಪೀಳಿಗೆ ಇದರಿಂದ ವಂಚಿತರಾಗಲಿದೆ ಎಂದರು.
ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು, ಕೃಷಿ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಶಿವಪುತ್ರ ಹೊನ್ನಳ್ಳಿ, ರೈಲ್ವೆ ಕೇಂದ್ರಿಯ ಅಸ್ಪತ್ರೆಯ ಹೆಚ್ಚುವರಿ ಮುಖ್ಯ ಆರೋಗ್ಯ ನಿರ್ದೇಶಕ ಡಾ. ಭೀಮರಾವ್ ವಾಡಿಕರ, ಡಾ. ಸೋಮಶೇಖರ ಕಡೂರು ಸೇರಿದಂತೆ ಹಲವರಿದ್ದರು.ಜಾಗ ಗುರುತಿಸಿದರೆ ನಿವೇಶನಕ್ಕೆ ಕ್ರಮಸಮಾಜದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಇದ್ದರೂ ನನ್ನ ಬಳಿ ಚರ್ಚಿಸಿದರೆ ನಿಮ್ಮ ಬೇಡಿಕೆಗೆ ಸ್ಪಂದಿಸುವೆ. ಅಂಚಟಗೇರಿ ಬಳಿ 8 ಎಕರೆ ಜಾಗ ಮಂಜೂರು ಮಾಡಿಸಲಾಗಿದೆ. ನಿವೇಶನಕ್ಕಾಗಿ ಜಾಗ ಗುರುತಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬುದ್ಧವಿಹಾರ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುತ್ತದೆ. ಶಿಕ್ಷಣ ಸಂಸ್ಥೆ ಸ್ಥಾಪಿಸುವ ಉದ್ದೇಶವೂ ಇದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.