ಹೊಲದ ಬೇಲಿಗೆ ಬೆಂಕಿ ಬಿದ್ದಿದ್ದನ್ನು ನಂದಿಸಲು ಕೃಷಿ ಹೊಂಡದಿಂದ ನೀರು ತರಲು ಹೋಗಿ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ

ಕನ್ನಡಪ್ರಭ ವಾರ್ತೆ ಪಾವಗಡ

ಹೊಲದ ಬೇಲಿಗೆ ಬೆಂಕಿ ಬಿದ್ದಿದ್ದನ್ನು ನಂದಿಸಲು ಕೃಷಿ ಹೊಂಡದಿಂದ ನೀರು ತರಲು ಹೋಗಿ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ

ಭಾರತಿ (24) ಮೃತ ದುರ್ದೈವಿ. ಪಾವಗಡ ತಾಲೂಕಿನ ಪಳವಳ್ಳ ಗ್ರಾಮ ಪಂಚಾಯಿತಿ ಹೊಸಹಳ್ಳಿ ಗ್ರಾಮದ ರೈತ ಕೃಷ್ಣಾರೆಡ್ಡಿ ಅವರ ಪುತ್ರಿ ಭಾರತಿ ಅವರು ತಮ್ಮ ಜಮೀನಿನ ಕೃಷಿ ಚಟವಟಿಕೆಯಲ್ಲಿ ತೊಡಗಿದ್ದರು. ಆಗ ಯಾರೋ ದುಷ್ಕರ್ಮಿಗಳು ಜಮೀನಿನ ಗಿಡಗಳ ರಕ್ಷಣೆಯ ಬೇಲಿಗೆ, ಬೆಂಕಿ ಹೆಚ್ಚಿದ್ದು, ಬೆಂಕಿ ಬೇಲಿ ಪೂರಾ ವ್ಯಾಪ್ತಿಸಿ ಹೊತ್ತಿ ಉರಿಯುತ್ತಿತ್ತು. ಜಮೀನಿನಲ್ಲಿ ಬೇಲಿ ಪಕ್ಕದಲ್ಲಿದ್ದ ಹುಲ್ಲು ಬಣವೆಗೆ ಬೆಂಕಿ ತಾಕುತ್ತಿದ್ದ ವೇಳೆ ಗಾಬರಿಗೊಂಡು, ಈ ವೇಳೆ ಬೆಂಕಿ ನಂದಿಸುವ ಸಲುವಾಗಿ ಪಕ್ಕದ ಗೋವಿಂದರೆಡ್ಡಿ ಅವರಿಗೆ ಸೇರಿದ್ದ ಜಮೀನಿನಲ್ಲಿ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ಬೆಂಕಿಗೆ ಚೆಲ್ಲಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಹೋಗಿ ಬಿಂದಿಗೆಗೆ ನೀರು ತುಂಬುತ್ತಿರುವ ವೇಳೆ ಹೊದಿಗೆಯ ಟಾರ್ಪಲ್ ಜಾರಿ ಕೃಷಿ ಹೊಂಡದಲ್ಲಿ ಮುಳುಗಿದ್ದಾರೆ. ಘಟನೆ ಕುರಿತು ಸ್ಥಳಕ್ಕೆ ತಂದೆ ಹಾಗೂ ಅಣ್ಣ ಹೋಗುವಷ್ಟರಲ್ಲಿ ಭಾರತಿ ಸಾವನ್ನಪ್ಪಿದ್ದರು. ಘಟನೆ ಕುರಿತು ತಂದೆ ಕೃಷ್ಣಾರೆಡ್ಡಿ ನೀಡಿದ ದೂರಿನ ಮೇರೆಗೆ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ಘಟನೆ ಸಂಭವಿಸಿದ್ದು ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.