ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆಯಿಂದ ಟ್ರ್ಯಾಕ್ಟರ್‌, ರೂಟರ್‌, ಕಟ್ಟರ್‌ ಸೇರಿದಂತೆ ಹಲವು ಯಂತ್ರಗಳ ಬಳಕೆ ಕೃಷಿಯಲ್ಲಿ ಹೇರಳವಾಗುತ್ತಿದೆ. ಆದರೆ ಪ್ರತಿ ಯಂತ್ರಗಳ ಬಳಕೆಯೂ ಡೀಸೆಲ್‌ ಅತ್ಯಗತ್ಯ.

ಶಿವಾನಂದ ಗೊಂಬಿಹುಬ್ಬಳ್ಳಿ:

ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಕ್ಯಾನ್‌-ಬಾಟಲಿಯಲ್ಲಿ ಪೆಟ್ರೋಲ್‌-ಡೀಸೆಲ್‌ ಕೊಡದೇ ಇರುವುದು ಕೃಷಿ ಕೆಲಸಕ್ಕೆ ತೀವ್ರ ಹಿನ್ನಡೆಯಾಗುತ್ತಿದ್ದು ರೈತರು ತೊಂದರೆಗೆ ಒಳಗಾಗಿದ್ದಾರೆ.

ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆಯಿಂದ ಟ್ರ್ಯಾಕ್ಟರ್‌, ರೂಟರ್‌, ಕಟ್ಟರ್‌ ಸೇರಿದಂತೆ ಹಲವು ಯಂತ್ರಗಳ ಬಳಕೆ ಕೃಷಿಯಲ್ಲಿ ಹೇರಳವಾಗುತ್ತಿದೆ. ಆದರೆ ಪ್ರತಿ ಯಂತ್ರಗಳ ಬಳಕೆಯೂ ಡೀಸೆಲ್‌ ಅತ್ಯಗತ್ಯ. ಟ್ರ್ಯಾಕ್ಟರ್‌ ಸೇರಿದಂತೆ ಪ್ರತಿಯೊಂದು ಯಂತ್ರಗಳನ್ನು ಒಮ್ಮೆ ಹೊಲಕ್ಕೆ ತೆಗೆದುಕೊಂಡು ಹೋದರೆ ಬಿತ್ತನೆ ಮುಗಿದ ಬಳಿಕವೇ ಮನೆಗೆ ಬರುತ್ತವೆ. ಕೃಷಿಯಲ್ಲಿ ಅಷ್ಟೊಂದು ಯಂತ್ರ ಬಳಕೆ ಮಾಡಲಾಗುತ್ತಿದೆ. ಈ ಯಂತ್ರಗಳಿಗೆ ಮೊದಲು ಕ್ಯಾನ್‌, ಬಾಟಲಿಯಲ್ಲಿ ಡೀಸೆಲ್‌ ತುಂಬಿಕೊಂಡು ಬಂದು ಹಾಕುತ್ತಿದ್ದರು. ಇದೀಗ ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಸರ್ಕಾರ ಯಾವುದೇ ಕಾರಣಕ್ಕೂ ಕ್ಯಾನ್‌ಗಳಲ್ಲಿ ಡೀಸೆಲ್‌ ಕೊಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅದರಂತೆ ಜಿಲ್ಲೆಯಲ್ಲಿ ಎಲ್ಲ ಬಂಕ್‌ಗಳಿಗೂ ಸುತ್ತೋಲೆ ಕಳುಹಿಸಿ ಕ್ಯಾನ್‌ ಅಥವಾ ಬಾಟಲಿಗಳಲ್ಲಿ ಡೀಸೆಲ್‌-ಪೆಟ್ರೋಲ್‌ ಕೊಡಬೇಡಿ ಎಂದು ತಾಕೀತು ಮಾಡಿದೆ. ಜತೆಗೆ ಒಂದು ವೇಳೆ ಕೊಟ್ಟಿದ್ದೇ ಪೆಟ್ರೋಲ್‌ ಬಂಕ್‌ಗಳಲ್ಲಿ ವಿತರಣಾ ಯಂತ್ರ ನಿಷ್ಕ್ರಿಯಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನು ಧಿಕ್ಕರಿಸಿ ನೀಡಿದ ಒಂದೆರೆಡು ಬಂಕ್‌ಗಳ ನಿಷ್ಕ್ರಿಯಗೊಂಡಿವೆ. ಹೀಗಾಗಿ ಯಾವುದೇ ಬಂಕ್‌ಗಳಲ್ಲಿ ಪೆಟ್ರೋಲ್‌-ಡೀಸೆಲ್‌ನ್ನು ಕ್ಯಾನ್‌ ಅಥವಾ ಬಾಟಲಿಯಲ್ಲಿ ಕೊಡುತ್ತಿಲ್ಲ. ಹೀಗಾಗಿ ಡೀಸೆಲ್‌ ಬೇಕಾದರೆ ವಾಹನವನ್ನೇ ಬಂಕ್‌ಗೆ ತೆಗೆದುಕೊಂಡು ಬರಬೇಕು ಎಂಬುದು ಬಂಕ್‌ಗಳ ಸಿಬ್ಬಂದಿ ಸ್ಪಷ್ಟನೆ.

ಆದರೆ, ಹೊಲಗಳಿಂದ ಯಾವುದೇ ಬಂಕ್‌ಗಳು ಕನಿಷ್ಠವೆಂದರೂ 8ರಿಂದ 10 ಕಿಲೋ ಮೀಟರ್ ದೂರವೇ ಇರುತ್ತವೆ. ಹೀಗಾಗಿ ಪ್ರತಿಸಲ ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಿಯೇ ಡೀಸೆಲ್‌ ತರವುದು ಕಷ್ಟ. ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಿ ತಕ್ಷಣವೇ ಬರಬೇಕೆಂದರೂ ಅದು ಸಾಧ್ಯವಾಗಲ್ಲ. ಬಂಕ್‌ಗಳಲ್ಲಿ ಸರತಿ ಸಾಲು ಇದ್ದೇ ಇರುತ್ತದೆ. ಟ್ಯ್ರಾಕ್ಟರ್‌ ತೆಗೆದುಕೊಂಡು ಹೋಗಿ ಡೀಸೆಲ್‌ ತುಂಬಿಸಿಕೊಂಡು ಬರಬೇಕೆಂದರೆ ಕನಿಷ್ಠ ಮೂರ್ನಾಲ್ಕು ಗಂಟೆಗೂ ಹೆಚ್ಚು ಕಾಲ ವ್ಯಯವಾಗುತ್ತದೆ. ಅಷ್ಟರ ವರೆಗೂ ಕಾರ್ಮಿಕರನ್ನು ಖಾಲಿ ಕೂಡಿಸಬೇಕಾಗುತ್ತದೆ ಎಂಬ ಗೋಳು ರೈತರದ್ದು.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ:

ಜಿಲ್ಲಾಡಳಿತ ಉಳಿದ ವಾಹನಗಳಿಗೆ ಡೀಸೆಲ್‌ ಕ್ಯಾನ್‌ಗಳಲ್ಲಿ ಕೊಡುವುದು ಬೇಡ. ಆದರೆ, ಕೃಷಿ ಕೆಲಸಕ್ಕೆಂದು ಬಳಕೆಯಾಗುವ ಟ್ರ್ಯಾಕ್ಟರ್‌ ಸೇರಿದಂತೆ ಇತರ ಯಂತ್ರಗಳಿಗಾದರೂ ಕ್ಯಾನ್‌ಗಳಲ್ಲಿ ಕೊಡುವಂತೆ ಆಗಬೇಕು. ಬೇಕಾದರೆ ರೈತರು ಎಂದರೆ ಅವರ ಆಧಾರ್‌ ಕಾರ್ಡ್‌ ಅಥವಾ ಬೇರೆ ದಾಖಲೆ ಪರಿಶೀಲಿಸಲಿ. ನಮಗೆ ಕ್ಯಾನ್‌ಗಳಲ್ಲಿ ಕೊಡಲು ಕ್ರಮಕೈಗೊಳ್ಳಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹ.ಸರ್ಕಾರವೇ ಕ್ಯಾನ್‌-ಬಾಟಲಿಯಲ್ಲಿ ಡೀಸೆಲ್‌, ಪೆಟ್ರೋಲ್‌ ನೀಡದಂತೆ ಆದೇಶಿಸಿದೆ. ಹೀಗಾಗಿ ನಾವು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.

ವಿನೋದಕುಮಾರ ಹೆಗ್ಗಳಗಿ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ಯಾನ್‌ಗಳಲ್ಲಿ ಡೀಸೆಲ್‌ ಕೊಡದೇ ಇರುವುದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಾರ್ಮಿಕರ ಕೊರತೆಯಿಂದ ಕೃಷಿ ಯಂತ್ರೋಪಕರಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಬಿತ್ತನೆ ಸಮಯವಾಗಿದ್ದು ಬಿತ್ತನೆ ಮಾಡುವುದು ಬಿಟ್ಟು ಡೀಸೆಲ್‌ ತರಲು ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಜಿಲ್ಲಾಡಳಿತ ಕ್ಯಾನ್‌ಗಳಲ್ಲಿ ಡೀಸೆಲ್‌ ಕೊಡುವಂತೆ ಆದೇಶಿಸಬೇಕು.

ಸುರೇಶ ಸೋಮನಕೊಪ್ಪ, ಚವರಗುಡ್ಡ ರೈತ