ನಿಯಮಿತವಾಗಿ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು ಶಾಲೆಗಳಿಗೆ ಸಂದರ್ಶನ ನೀಡಿ, ಫಲಿತಾಂಶ ಹೆಚ್ಚಿಸಲು ಅಗತ್ಯವಿರುವ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನವನ್ನು ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಪಾಲಕರಿಗೆ ನೀಡಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿರುತ್ತಾರೆ.

ಧಾರವಾಡ:

ಇತ್ತೀಚಿಗೆ ಮುಕ್ತಾಯವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 95.5ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಕಳೆದ ವರ್ಷದ 18ನೇ ಸ್ಥಾನದಿಂದ 12ನೇ ಸ್ಥಾನ ಪಡೆದಿರುವುದಕ್ಕೆ ಡಯಟ್‌ನ ಕೊಡುಗೆ ಅಪಾರ ಎಂದು ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ ಹೇಳಿದರು.

ಡಯಟ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ 18 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದ ಅವರು, ನಿಯಮಿತವಾಗಿ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು ಶಾಲೆಗಳಿಗೆ ಸಂದರ್ಶನ ನೀಡಿ, ಫಲಿತಾಂಶ ಹೆಚ್ಚಿಸಲು ಅಗತ್ಯವಿರುವ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನವನ್ನು ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಪಾಲಕರಿಗೆ ನೀಡಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿರುತ್ತಾರೆ ಎಂದರು.

ಅಪರ ಆಯುಕ್ತರ ಕಚೇರಿಯ ಉಪನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಇಲಾಖೆಯು 2025-26ನೇ ಸಾಲಿನ ಫಲಿತಾಂಶ ಉತ್ತಮಗೊಳಿಸಲು ಹಮ್ಮಿಕೊಂಡ ಎಲ್‌ಬಿಎ, 40 ಪ್ಲಸ್ ಹಾಗೂ 29 ಅಂಶಗಳ ಕಾರ್ಯಕ್ರಮಗಳಿಂದ ಹಿಡಿದು, ಮಕ್ಕಳು ಕನಿಷ್ಠ ಪಾಸಾಗಲು ಬೇಕಾಗುವ ವಿಷಯಗಳ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಿ ಬೋಧನೆ ಮಾಡಿದ್ದು, ಫಲಿತಾಂಶ ಸುಧಾರಣೆಗೆ ಕಾರಣವಾಗಿದೆ ಎಂದು ಹೇಳಿದರು.

ಉಪಪ್ರಾಂಶುಪಾಲ ಜೆ.ಜಿ. ಸೈಯದ್, ಹಿರಿಯ ಉಪನ್ಯಾಸಕರಾದ ಸುಗಂಧ ದೊಡಮನಿ, ಲಕ್ಷ್ಮಿದೇವಿ ಭಗವತಿ ಇದ್ದರು. ಪುಟ್ಟಪ್ಪ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಎಫ್‌.ವಿ. ಮಂಜಣ್ಣವರ್ ಸ್ವಾಗತಿಸಿದರು. ರೇಖಾ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿಯರಾದ ಶಾಂತಾ ಮೇಟಿ ಪ್ರಾರ್ಥಿಸಿದರು ಹಾಗೂ ಮೇನಕಾ ಮಠದ ವಂದಿಸಿದರು.