ಸಾರಾಂಶ
ಯಲ್ಲಾಪುರ: ಕಳೆದ ಗ್ರಾಮದೇವಿ ಜಾತ್ರೆಯಲ್ಲಿ ಒಟ್ಟು ೨೦೫ ಮಳಿಗೆಗಳಲ್ಲಿ ೪ ಮಳಿಗೆಗಳು ಮಾತ್ರ ಹರಾಜಾಗಿಲ್ಲ. 201 ಮಳಿಗೆಗಳ ಲೆಕ್ಕ ಕೊಡಬೇಕಿತ್ತು. ಆದರೆ ೧೧೭ ಮಳಿಗೆಗಳ ಲೆಕ್ಕ ಕೊಡಲಾಗಿದೆ. ಮೇಲ್ನೋಟಕ್ಕೆ ಲೆಕ್ಕದಲ್ಲಿ ಏನೋ ಅವ್ಯವಹಾರವಾಗಿದೆ ಎಂಬ ಸಂಶಯ ಬರುತ್ತದೆ. ಸುಮಾರು ₹೧೧.೮೮ ಲಕ್ಷ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಪಪಂ ಸದಸ್ಯ ರಾಧಾಕೃಷ್ಣ ನಾಯ್ಕ ಆಕ್ಷೇಪವೆತ್ತಿದರು.
ಇಲ್ಲಿಯ ಪಪಂ ಸಭಾಭವನದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ೭೮ ಮಳಿಗೆಗಳ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು.ಹರಾಜಾದ ಮಳಿಗೆಗಳ ಹಣ ಸರ್ಕಾರಿ ಲೆಕ್ಕದಂತೆ ಜಮಾ ಆಗಬೇಕು. ಕೊರತೆಯಿರುವ ಹಣ ಪಪಂಗೆ ಜಮಾ ಆಗಬೇಕು ಎಂದು ರಾಧಾಕೃಷ್ಣ ನಾಯ್ಕ ಆಗ್ರಹಿಸಿದರು.
ಜಾತ್ರೆಯ ಲೆಕ್ಕ ಕೊಡಲು ೨ ವರ್ಷ ವಿಳಂಬ ಯಾಕಾಯಿತು? ಮುಖ್ಯಾಧಿಕಾರಿ ಮಾತ್ರ ಬದಲಾಗಿದ್ದು, ಉಳಿದೆಲ್ಲ ಅಧಿಕಾರಿಗಳು ಅವರೇ ಇದ್ದಾರೆ. ಲೆಕ್ಕದಲ್ಲಿನ ವ್ಯತ್ಯಾಸ ಆಗಿದ್ದು ಹೇಗೆಂಬ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು. ಹಿಂದಿನ ಮುಖ್ಯಾಧಿಕಾರಿ ವಿರುದ್ಧ ತನಿಖೆ ಆಗಬೇಕು ಎಂದು ಸದಸ್ಯ ಸತೀಶ ನಾಯ್ಕ ಒತ್ತಾಯಿಸಿದರು.ಜಾತ್ರೆಯ ಲೆಕ್ಕಾಚಾರದ ಬಗ್ಗೆ ವಿಶೇಷ ಸಭೆ ಕರೆದಿದ್ದೀರಿ. ಈ ಹಿಂದೆ ಇದೇ ವಿಷಯಕ್ಕೆ ಐದು ಸಭೆ ನಡೆಯಿತು. ಆದರೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಇನ್ನೂ ಬಂದಿಲ್ಲ. ಅನೇಕ ಲೆಕ್ಕಗಳನ್ನು ಮುಚ್ಚಿಡಲಾಗುತ್ತಿದೆ. ಯಾರ‍್ಯಾರು ಭಾಗಿ ಎಂದು ಸರಿಯಾಗಿ ಜಿಲ್ಲಾ ಅಥವಾ ರಾಜ್ಯಮಟ್ಟದ ಅಧಿಕಾರಿಗಳಿಂದ ತನಿಖೆಯಾಗಬೇಕು. ಅಲ್ಲಿಯವರೆಗೂ ಇದು ಸರಿಯಾಗುವ ಲಕ್ಷಣ ಕಂಡುಬರುತ್ತಿಲ್ಲ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಸದಸ್ಯರು ಭಾಗವಹಿಸಿದ್ದರು. ಕೆಲವು ಸದಸ್ಯರ ಗೈರು ಎದ್ದು ತೋರುತ್ತಿತ್ತು. ಒಂದೇ ವಿಷಯ ಅರ್ಧದಿನದ ಸಭೆಯ ಕಲಾಪ ನುಂಗಿ ಹಾಕಿದ್ದು ವಿಶೇಷ ಆಗಿತ್ತು.