ಪುರಸಭೆ ವ್ಯಾಪ್ತಿಯ ಹೊಸಹೂಳಲು-ಪಟ್ಟಣದಲ್ಲಿ ಈ ಹಿಂದೆ ಆಡಳಿತ ನಡೆಸಿದ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಕುಡಿಯುವ ನೀರಿನ ಸೌಲಭ್ಯಕ್ಕೆ ಅಮೃತ್ ಜಲ್ ಜೀವನ ಯೋಜನೆಯಡಿ ಕೆ.ಆರ್.ಪೇಟೆ ಪಟ್ಟಣದಲ್ಲಿ 70 ಕಿ.ಮೀ ಅಷ್ಟು ರಸ್ತೆಗಳನ್ನು ಅಗೆದು ಪೈಪ್ ಲೈನ್ ಅಳವಡಿಸಿದ್ದಾರೆ. ಆದರೆ, ಕೆಲವೆಡೆ ಡಾಂಬರೀಕರಣ ಮಾಡದೆ ಹಾಗೆ ಬಿಟ್ಟಿರುವುದರಿಂದ ಪೈಪ್ ಹೊಡೆದು ರಸ್ತೆಗೆ ನೀರು ಹರಿದು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಸಭೆ ವ್ಯಾಪ್ತಿಯ ಹೊಸಹೂಳಲು-ಪಟ್ಟಣದಲ್ಲಿ ಈ ಹಿಂದೆ ಆಡಳಿತ ನಡೆಸಿದ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಕುಡಿಯುವ ನೀರಿನ ಸೌಲಭ್ಯಕ್ಕೆ ಅಮೃತ್ ಜಲ್ ಜೀವನ ಯೋಜನೆಯಡಿ ಪಟ್ಟಣದಲ್ಲಿ 70 ಕಿ.ಮೀ ಅಷ್ಟು ರಸ್ತೆಗಳನ್ನು ಅಗೆದು ಪೈಪ್ ಲೈನ್ ಅಳವಡಿಸಿದ್ದಾರೆ. ಆದರೆ, ಕೆಲವೆಡೆ ಡಾಂಬರೀಕರಣ ಮಾಡದೆ ಹಾಗೆ ಬಿಟ್ಟಿರುವುದರಿಂದ ಪೈಪ್ ಹೊಡೆದು ರಸ್ತೆಗೆ ನೀರು ಹರಿದು ಬರುತ್ತಿದೆ.

33 ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ, ಮನೆ-ಮನೆಗೆ ನಲ್ಲಿ ಅಳವಡಿಸುವ ಕೆಲಸವನ್ನು ಶೇ.90 ರಷ್ಟು ಪೂರ್ಣವಾಗಿದೆ. ಕೆಲವು ಮನೆಗಳಿಗೆ ನಲ್ಲಿ ಸಂಪರ್ಕ ಕೈ ಬಿಡಲಾಗಿದೆ. ಎರಡು ಪಟ್ಟಣದಲ್ಲಿ ಬಹುತೇಕ ರಸ್ತೆ ಗಳನ್ನು ಡಾಂಬರ್ ಹಾಕಿ ಓಡಾಡಲು ಅನುಕೂಲ ಮಾಡಲಾಗಿತ್ತು.

ಇನ್ನು ಕೆಲವೆಡೆ ರಸ್ತೆಗಳನ್ನು ಕೇಂದ್ರ ಸರ್ಕಾರದ ಅಮೃತ್ ಜಲ್ ಜೀವನ್ ಯೋಜನೆ ಜಾರಿ ಹೊಣೆ ಹೊತ್ತ ಗುತ್ತಿಗೆದಾರರು ಕಾಮಗಾರಿ ಮುಗಿದ ಮೇಲೆ ಅಗೆದ ರಸ್ತೆಗಳಿಗೆ ಡಾಂಬರ್ ಹಾಕದೇ ನಿರ್ಲಕ್ಷ್ಯ ಮಾಡಿದ್ದಾರೆ.

ಸಿಸಿ ರಸ್ತೆ ಅಗೆದರೆ ಮತ್ತೆ ಆ ರಸ್ತೆಯನ್ನು ಕಾಂಕ್ರಿಟ್ ಮಾಡಿ ಸರಿಪಡಿಸಬೇಕೆಂದು ಟೆಂಡರ್ ನಿಯಮವಿದೆ. ಆದರೆ, ಎಲ್ಲಾ 23 ವಾರ್ಡ್ ಗಳಲ್ಲಿ ಕಾಮಗಾರಿ ಮುಗಿದು 6 ತಿಂಗಳು ಕಳೆದರು ಸಹಾ ಡ್ಯಾಮೇಜ್ ಮಾಡಿರುವ ರಸ್ತೆಗಳನ್ನು ಸರಿಪಡಿಸುವ ಗೋಜಿಗೆ ಗುತ್ತಿಗೆದಾರ ಹೋಗಿಲ್ಲ. ಸ್ಥಳೀಯ ಪುರಸಭೆ ಸದಸ್ಯರು ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು ಸಹಾ ರಸ್ತೆಗಳನ್ನು ಸರಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾಮಗಾರಿ ಹೊಣೆ ಹೊತ್ತಿರುವ ಕರ್ನಾಟಕ ನಗರ-ಗ್ರಾಮೀಣ ನೀರು ಸರಬರಾಜು ಹಾಗೂ ಒಳಚರಂಡಿ ಸರಬರಾಜು ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಸುಮ್ಮನೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಅಗೆದಿರುವ ರಸ್ತೆ ಯನ್ನು ಕೂಡಲೇ ಸರಿಪಡಿಸಲು ಸಂಬಂಧ ಪಟ್ಟವರ ಮೇಲೆ ಕ್ರಮ ವಹಿಸಲು ನಾಗರಿಕರು ಅಗ್ರಹಿಸಿದ್ದಾರೆ.