ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರಗಳಲ್ಲಿ ಜನರು ಡಿಜಿ-ಪೇ ಮೂಲಕ ತಮ್ಮ ಹಳ್ಳಿಯ್ಲೇ ಖಾತೆಯಿಂದ ಹಣ ಹಿಂಪಡೆಯುವ ಅವಕಾಶವಿದ್ದು, ಗ್ರಾಮೀಣ ಭಾಗದ ಜನರಿಗೆ ಇದು ವರದಾನವಾಗಲಿದೆ ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅಭಿಪ್ರಾಯಪಟ್ಟರು.

ಉಡುಪಿ: ಗ್ರಾಮೀಣ ಭಾಗದ ಜನರು ತಮ್ಮ ಖಾತೆಯಿಂದ ಹಣವನ್ನು ಎಟಿಎಂ ಮೂಲಕ ಪಡೆಯಲು ದೂರದ ಪ್ರದೇಶಗಳಿಗೆ ತೆರಳಬೇಕಾಗಿದ್ದು, ಇದರ ಬದಲಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರಗಳಲ್ಲಿ ಜನರು ಡಿಜಿ-ಪೇ ಮೂಲಕ ತಮ್ಮ ಹಳ್ಳಿಯ್ಲೇ ಖಾತೆಯಿಂದ ಹಣ ಹಿಂಪಡೆಯುವ ಅವಕಾಶವಿದ್ದು, ಗ್ರಾಮೀಣ ಭಾಗದ ಜನರಿಗೆ ಇದು ವರದಾನವಾಗಲಿದೆ ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಜಿ-ಪೇಯಿಂದ ಗ್ರಾಮೀಣ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದ್ದು, ತಮ್ಮ ಊರಿನಲ್ಲಿ ನಗದು ಸೌಲಭ್ಯ ಸಿಗಲಿದ್ದು, ಬ್ಯಾಂಕ್ ಅಥವಾ ಎಂಟಿಎಂಗೆ ಹೋಗುವ ಅಗತ್ಯವಿರುವುದಿಲ್ಲ ಮತ್ತು ರಶೀದಿ ಬರೆಯುವ ಅಥವಾ ಎಟಿಎಂ ಕಾರ್ಯದ ಬಗ್ಗೆ ಗೊಂದಲ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ ಎಂದರು.

ಡಿಜಿ-ಪೇಯ ಮೂಲಕ ಹಣ ಹಿಂಪಡೆಯುವುದು, ಮಿನಿ ಸ್ಟೇಟ್ಮೆಂಟ್ ತೆಗೆಯುವುದು, ಬ್ಯಾಲೆನ್ಸ್ ಮುಂತಾದ ಸೇವೆಗಳು ಲಭ್ಯವಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸುರೇಂದ್ರ, ಯೋಜನಾಧಿಕಾರಿ ದಿಲೀಪ್ ಜೈನ್, ತಾಲೂಕು ನೋಡಲ್ ಅಧಿಕಾರಿ, ಸೇವಾ ಪ್ರತಿನಿಧಿ ಮತ್ತು ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.