ಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವುದು, ಚಕ್ಕರ್ ಹೊಡೆಯುವುದನ್ನು ಮನಗಂಡು ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಗ್ರಾಮೀಣ ಭಾಗದ ಶಿಕ್ಷಕರಿಗೆ ಫಜೀತಿ ತಂದಿದೆ.ರಾಜ್ಯ ಸರ್ಕಾರ ಎಲ್ಲ ಇಲಾಖೆಗಳ ನೌಕರರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗಲಿ, ಚಕ್ಕರ್ ಹೊಡೆಯದಿರಲಿ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಲಿ ಎಂಬ ಕಾರಣಕ್ಕೆ ಕಾಮ್ಸ್ (ಕರ್ನಾಟಕ ಮುಂದುವರಿದ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಎಂಬ ಆನ್‌ಲೈನ್ ಆ್ಯಪ್ ಪರಿಚಯಿಸಿದೆ. ಈ ಮೂಲಕ ಹಾಜರಾತಿಯನ್ನು ಆ್ಯಪ್ ಮೂಲಕವೇ ನಮೂದಿಸುವುದು ಕಡ್ಡಾಯವಾಗಿದೆ. ಇದು ಬೇರೆ ಇಲಾಖೆ ಹಾಗೂ ನಗರ ಪ್ರದೇಶದಲ್ಲಿರುವ ಶಿಕ್ಷಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳಿಂದ ತೀವ್ರ ಸಂಕಷ್ಟ ತಂದಿದೆ.ಏನಿದು ಸಮಸ್ಯೆ?ನಿಗದಿತ ಶಾಲೆಯಿಂದ 100 ಮೀ. ವ್ಯಾಪ್ತಿಯೊಳಗೆ ಆನ್‌ಲೈನ್ ಹಾಜರಾತಿ ಹಾಕಬೇಕು. ಆದರೆ, ಇದಕ್ಕೆ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ. ಒಂದು ಹಾಜರಾತಿ ಹಾಕಲು 8ರಿಂದ 10 ಬಾರಿ ಪ್ರಯತ್ನಿಸಬೇಕು. ರಿಜಿಸ್ಟರ್ ಮಾಡುವ ವೇಳೆ ಯಾವ ರೀತಿ ಮುಖಭಾವ ಇರುತ್ತದೆಯೋ ಅದೇ ಭಾವದಲ್ಲಿ ಫೋಟೋ ತೆಗೆದುಕೊಳ್ಳಬೇಕು. ಒಂದು ವೇಳೆ ನೆರಳು, ಧೂಳು, ಕನ್ನಡಕ, ಲಿಪ್‌ಸ್ಟಿಕ್, ವಿಭೂತಿ ಇತ್ಯಾದಿಗಳಿದ್ದರೂ ಆ್ಯಪ್ ಮುಖವನ್ನು ಕ್ಯಾಪ್ಚರ್ ಮಾಡುವುದಿಲ್ಲ. ಆಗ ಮಿಸ್ ಮ್ಯಾಚ್ ಫೇಸ್ ಎಂಬ ಸಂದೇಶ ಬರುತ್ತದೆ. ಹೀಗಾಗಿ ಉತ್ತಮ ಬೆಳಕು, ಧೂಳು ಇಲ್ಲದೆ ಇರುವ ಕಡೆ ಶಿಕ್ಷಕರು ಮೊಬೈಲ್ ಹಿಡಿದು ಅಲೆಯಬೇಕಾಗಿದೆ. ಇದರೊಂದಿಗೆ ಸರ್ವರ್ ಸಹ ನಿಧಾನ ಇರುವುದರಿಂದ ಶಿಕ್ಷಕರಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಒಂದು ವೇಳೆ ಫೇಸ್ ಮ್ಯಾಚ್ ಆಗದಿದ್ದರೆ ಅಂದು ಕರ್ತವ್ಯಕ್ಕೆ ಹಾಜರಾದರೂ ಎಲ್ಲಿ ರಜೆ ಬೀಳುತ್ತದೆಯೋ ಎಂಬ ಆತಂಕವೂ ಶಿಕ್ಷಕರನ್ನು ಕಾಡುತ್ತಿದೆ.
ಬಯೋಮೆಟ್ರಿಕ್‌ಗೆ ಕೋರಿಕೆ:ನಗರ ಪ್ರದೇಶದಲ್ಲಿ ನೆಟ್‌ವರ್ಕ್ ಸೇರಿದಂತೆ ಸರ್ವರ್ ಸಹ ಉತ್ತಮವಾಗಿರುತ್ತದೆ. ಹೀಗಾಗಿ ನಗರ ಪ್ರದೇಶಕ್ಕೆ ಮಾತ್ರ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಇಟ್ಟುಕೊಂಡು ಗ್ರಾಮೀಣ ಭಾಗದವರಿಗೆ ಶಾಲೆಯಲ್ಲಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಹಾಜರಾತಿ ಅಳವಡಿಸುವುದು ಉತ್ತಮ ಎಂದು ಸಲಹೆ ಶಿಕ್ಷಕರದ್ದು.--ಬಾಕ್ಸ್--ಆಧಾರ್ ತಿದ್ದುಪಡಿಯತ್ತ ಚಿತ್ತ!ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆಗೆ ಆಧಾರ್ ಕಾರ್ಡ್ ಹಾಗೂ ಎಚ್‌ಆರ್‌ಎಂಎಸ್‌ನಲ್ಲಿನ ಹೆಸರು ಅಲ್ಪಸ್ವಲ್ಪ ಬದಲಾಗಿದ್ದರೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಹಲವು ಶಿಕ್ಷಕರು ಎಚ್‌ಆರ್‌ಎಂಎಸ್‌ನಲ್ಲಿ ಇರುವಂತೆ ತಮ್ಮ ಹೆಸರು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ.-ಕೋಟ್-ಫೇಸ್ ರೀಡಿಂಗ್ ಬಯೋಮೆಟ್ರಿಕ್ ಸೂಕ್ತಕಾಮ್ಸ್ ಆ್ಯಪ್‌ಗೆ ನೆಟ್‌ವರ್ಕ್ ಸಮಸ್ಯೆಯಾಗುತ್ತಿದ್ದು ಒಂದು ಹಾಜರಾತಿಗೆ 8 ರಿಂದ 10 ಬಾರಿ ಪ್ರಯತ್ನಿಸಬೇಕು. ಮಕ್ಕಳಿಗೆ ಹೊಸದಾಗಿ ಏನು ಕಲಿಸಬೇಕು ಎಂದು ಯೋಚಿಸುವ ಬದಲು ಎಲ್ಲಿ ಫೋಟೋ ಸರಿಯಾಗಿ ಬರುತ್ತದೆ ಎಂದು ಹುಡುಕಾಡುವಂತಾಗಿದೆ. ಶಾಲೆಯಲ್ಲೇ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಅಳವಡಿಸುವುದು ಸೂಕ್ತ.-ಲಿಂಗರಾಜ ರಾಮಾಪುರ, ಕಿರೇಸೂರು ಸರ್ಕಾರಿ ಶಾಲೆ ಶಿಕ್ಷಕ