ಬೆಂಗಳೂರು : ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಲಗೇಜ್‌ ಇಡಲು ಡಿಜಿಟಲ್‌ ಲಾಕರ್‌ ಸೌಲಭ್ಯ

| Published : Nov 14 2024, 01:32 AM IST / Updated: Nov 14 2024, 09:38 AM IST

ಸಾರಾಂಶ

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಇಡಲು ಡಿಜಿಟಲ್‌ ಲಾಕರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ಗಂಟೆಗಳ ಲೆಕ್ಕದಲ್ಲಿ ದರ ನಿಗದಿ ಪಡಿಸಲಾಗಿದೆ.

 ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಮೆಟ್ರೋ ನಿಲ್ದಾಣದಲ್ಲೇ ಸುರಕ್ಷಿತವಾಗಿಡುವ ಸಲುವಾಗಿ ಕ್ಲಾಕ್‌ ಟೆಕ್‌ ಸಲ್ಯೂಷನ್‌ ಸಂಸ್ಥೆಯು ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಸೇಫ್‌ ಕ್ಲಾಕ್‌ ಸ್ಮಾರ್ಟ್‌ ಡಿಜಿಟಲ್‌ ಲಾಕರ್‌ ಸೌಲಭ್ಯ ಆರಂಭಿಸಿದೆ.

ನೂತನ ಸೇವೆಯಂತೆ ಪ್ರಯಾಣಿಕರು 2ರಿಂದ 5 ಬ್ಯಾಗ್‌ಗಳನ್ನು ಸ್ಮಾರ್ಟ್‌ ಡಿಜಿಟಲ್‌ ಲಾಕರ್‌ನಲ್ಲಿ ಇಡಬಹುದಾಗಿದೆ. ಸ್ಮಾರ್ಟ್‌ ಡಿಜಿಟಲ್‌ ಲಾಕರ್‌ನಲ್ಲಿನ ಕಿಯೋಸ್ಕ್‌ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ಕಿಯೋಸ್ಕ್‌ನಲ್ಲಿ ಹಾಕಿದರೆ ಬ್ಯಾಗ್‌ಗಳನ್ನು ಇಡಲು ಲಾಕರ್‌ ದೊರೆಯಲಿದೆ. 2ರಿಂದ 3 ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಇಡಲು 70 ರು. ಹಾಗೂ 4ರಿಂದ 5 ಬ್ಯಾಗ್‌ಗಳನ್ನು ಇಡಲು 100 ರು. ಶುಲ್ಕ ವಿಧಿಸಲಾಗುತ್ತದೆ. ಅದೇ 12 ಗಂಟೆಗಳ ಕಾಲ ಬ್ಯಾಗ್‌ಗಳನ್ನು ಇಟ್ಟರೆ ಕ್ರಮವಾಗಿ ₹120 ಮತ್ತು ₹160 ರು. ಶುಲ್ಕ ನಿಗದಿ ಮಾಡಲಾಗಿದೆ.

ನೂತನ ಸೇವೆಯು ಸದ್ಯ ಮೆಜೆಸ್ಟಿಕ್‌ನ ಕೆಂಪೇಗೌಡ, ಚಿಕ್ಕಪೇಟೆ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲಿ ಇತರ ನಿಲ್ದಾಣಗಳಿಗೂ ವಿಸ್ತರಿಸಲು ಸೇಫ್‌ ಕ್ಲಾಕ್‌ ಸಂಸ್ಥೆ ಯೋಜಿಸಿದೆ.