ಸಾರಾಂಶ
ಹಾನಗಲ್ಲ: ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ಪಾರ್ಥಿವ ಶರೀರವನ್ನು ಪಟ್ಟಣದ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಬಯಲಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಅಭಿಮಾನಿಗಳ ಕಣ್ಣೀರಿನ ನಡುವೆ ಅಂತಿಮ ದರ್ಶನ ಅಭಿಮಾನಿಗಳ ನೋವಿನ ಅಭಿವ್ಯಕ್ತಿಗೆ ಸಾಕ್ಷಿಯಾಯಿತು.
ಗುರುವಾರ ಸಂಜೆ ೪ ಗಂಟೆಗೆ ಹಾನಗಲ್ಲ ಪ್ರವೇಶಿಸಿದ ಮನೋಹರ ತಹಶೀಲ್ದಾರ ಅವರ ಪಾರ್ಥಿವ ಶರೀರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಬಯಲಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಅವರ ಅಭಿಮಾನಿಗಳು ಬಂದು ದರ್ಶನ ಪಡೆದರು.ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಮಾತನಾಡಿ, ಮನೋಹರ ತಹಶೀಲ್ದಾರ ಸೇಡಿಲ್ಲದ ರಾಜಕಾರಣಿ. ಸದಾ ಬಡವರ, ದೀನ ದಲಿತರ ಸೇವೆಯಲ್ಲಿ ತಮ್ಮನ್ನು ಸವೆಸಿ, ಪಕ್ಷದ ನಿಷ್ಠೆಗೆ ಹೆಸರಾಗಿ, ಸೋಲು ಗೆಲುವುಗಳಲ್ಲಿ ಯಾವುದೆ ದ್ವೇಷಕ್ಕೆ ಅವಕಾಶವಿಲ್ಲದೆ ಎಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ಸಜ್ಜನ ರಾಜಕಾರಣಿ ಎಂದರು.ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸಾಮಿಗಳು ಪಾರ್ಥಿವ ಶರೀರಕ್ಕೆ ಪುಷ್ಪ ಸಲ್ಲಿಸಿ ಮಾತನಾಡಿ, ಮುತ್ಸದ್ಧಿ ರಾಜಕಾರಣಿ ಮನೋಹರ ತಹಶೀಲ್ದಾರ ಅಧಿಕಾರ ಇರಲಿ ಬಿಡಲಿ ಜನಸೇವೆಗೆ ಹೆಸರಾಗಿದ್ದರು. ಹಾನಗಲ್ಲ ವಿರಕ್ತಮಠದೊಂದಿಗೆ ಜಾತ್ಯತೀತವಾಗಿ ಭಕ್ತಿಭಾವಹೊಂದಿದ ಅವರ ನಡೆ ಅನುಕರಣೀಯವಾದುದು ಎಂದರು.ಶಿರಹಟ್ಠಿ ಫಕ್ಕೀರೇಶ್ವರ ಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ರಾಜಕಾರಣಕ್ಕೆ ತಿಲಕವಿಟ್ಟಂತೆ ತಮ್ಮ ಉತ್ತಮ ನಡೆನುಡಿಗಳ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ ಮನೋಹರ ತಹಶೀಲ್ದಾರ ಎಲ್ಲ ಕಾಲಕ್ಕೂ ಸಲ್ಲುವ ಸಜ್ಜನ ರಾಜಕಾರಣಿಯಾಗಿದ್ದರು ಎಂದರು.ಬೊಮ್ಮನಹಳ್ಳಿಯ ಶಿವಯೋಗೀಶ್ವರ ಮಹಾಸ್ವಾಮಿಗಳು, ಮಾಜಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಕೆಪಿಸಿಸಿ ಕಾರ್ಯದರ್ಸಿ ಪ್ರಕಾಶಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ಭರತ ಬೊಮ್ಮಾಯಿ, ಕೃಷ್ಣ ಈಳಿಗೇರ, ಎಂ.ಬಿ. ಕಲಾಲ, ರಾಜಶೇಖರಗೌಡ ಕಟ್ಟೇಗೌಡರ, ಮಾರುತಿ ಪುರ್ಲಿ, ಸಿ.ಆರ್. ಬಳ್ಳಾರಿ, ಕೊಟ್ರೇಶಪ್ಪ ಬಸೇಗಣ್ಣಿ, ಎ.ಎಸ್. ಬಳ್ಳಾರಿ, ಮಂಜುನಾಥ ನೀಲಗುಂದ, ಬಿ.ಎಸ್. ಅಕ್ಕಿವಳ್ಳಿ, ಎಸ್.ಎಂ.ಕೊತಂಬರಿ, ಎಂ.ಎ.ಹಿರೇಮಠ, ಸತೀಶ ದೇಶಪಾಂಡೆ, ಪರಮೇಶಪ್ಪ ಮೇಗಳಮನಿ, ಸಿದ್ದಪ್ಪ ಹಿರಗಪ್ಪನವರ, ಜೆಡಿಎಸ್ ತಾಲೂಕಾಧ್ಯಕ್ಷ ಆರ್.ಬಿ. ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಮಹೇಶ ಕಮಡೊಳ್ಳಿ, ಕಲ್ಯಾಣಕುಮಾರ ಶೆಟ್ಟರ, ಮಾಲತೇಶ ಸೊಪ್ಪಿನ, ಮಂಜು ಗುರಣ್ಣನವರ, ವಿಜಯಕುಮಾರ ದೊಡ್ಡಮನಿ ಸೇರಿದಂತೆ ಗಣ್ಯರು ಮನೋಹರ ತಹಶೀಲ್ದಾರ ಅವರ ಅಂತಿಮ ದರ್ಶನ ಪಡೆದರು.ಅಂತ್ಯಕ್ರಿಯೆ: ಶುಕ್ರವಾರ ನ. ೨೨ರಂದು ಮನೋಹರ ತಹಶೀಲ್ದಾರ ಅವರ ಸ್ವಗ್ರಾಮ ಹಾನಗಲ್ಲ ತಾಲೂಕಿನ ಅಕ್ಕಿವಳ್ಳಿಯಲ್ಲಿ ಮಧ್ಯಾಹ್ನ ೨ ಗಂಟೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.