ಮುಂದುವರಿದ ಕಾಲದಲ್ಲೂ ಸಹ ಇಂತಹ ಕ್ರೂರ ಘಟನೆಗಳು ನಡೆಯುತ್ತಿದ್ದು, ಇಡೀ ಮಾನವ ಕುಲಕ್ಕೆ ಕಳಂಕ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಮರ್ಯಾದಾ ಹತ್ಯೆಯ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತರಿಸಿದೆ. ಮುಂದುವರಿದ ಕಾಲದಲ್ಲೂ ಸಹ ಇಂತಹ ಕ್ರೂರ ಘಟನೆಗಳು ನಡೆಯುತ್ತಿದ್ದು, ಇಡೀ ಮಾನವ ಕುಲಕ್ಕೆ ಕಳಂಕ ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ವಿವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬದ ಸದಸ್ಯರ ಜತೆಗೆ ಮಾತನಾಡಿ ಮಾಹಿತಿ ಪಡೆದಿದ್ದು, ಈಗಾಗಲೇ ಸರ್ಕಾರದಿಂದ ಭದ್ರತೆ, ನೆರವು, ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದು ಸಂಬಂಧಪಟ್ಟವರ ಜತೆ ಮಾತನಾಡಿ, ಮತ್ತೆ ಇಂತಹ ಘಟನೆಗಳು ಮರುಕಳಿಸಿದಂತೆ ಸೂಚನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಗ್ರಾಮಾಂತರ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಮಕಾಂದರ, ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್, ಮೋಹನ ಹಿರೇಮನಿ, ಷಹಜಾನ್ ಮುಜಾಹಿದ್, ಇನಾಯಿತ್ ಪಠಾಣ, ಸುಜಾತ ಹುರಕಡ್ಲಿ ಸೇರಿದಂತೆ ಹಲವರಿದ್ದರು.ನರೇಗಾ ಹೆಸರು ಬದಲಾವಣೆ ಖಂಡಿಸಿ ಜ. 5ರಿಂದ ದೇಶಾದ್ಯಂತ ಹೋರಾಟ

ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರು ಕೈಬಿಟ್ಟು, ಯೋಜನೆಯನ್ನೇ ಬದಲಿಸಿದ ಕೇಂದ್ರದ ನಿಲುವು ಖಂಡಿಸಿ ಜ. 5ರಿಂದ ದೇಶಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡಲಾಗಿದೆ. ಕೇಂದ್ರದ ಈ ನೀತಿಯನ್ನು ಇಂಡಿಯಾ ಮೈತ್ರಿಕೂಟ ಸೇರಿದಂತೆ ಇಡೀ ದೇಶ ಒಟ್ಟಾಗಿ ವಿರೋಧಿಸಿದ್ದು, ಈ ಬದಲಾವಣೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಒತ್ತಡ ಹಾಕಲಾಗುವುದು ಎಂದರು.ಇದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಯೋಜನೆಯಾಗಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ಸಾಂವಿಧಾನಿಕವಾಗಿ ಉದ್ಯೋಗ ಖಾತರಿ ಹಕ್ಕು ನೀಡಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಯಲ್ಲಿನ ಅನುದಾನದ ಪಾಲನ್ನು 60:40 ಹಂಚಿಕೆ ಮೂಲಕ ರಾಜ್ಯ ಸರ್ಕಾರದ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ. ತನ್ನ ತಪ್ಪು ಮರೆಮಾಚಲು 100 ದಿನಗಳಿಂದ 125 ಉದ್ಯೋಗ ದಿನಗಳನ್ನು ಏರಿಕೆ ಮಾಡಲಾಗುತ್ತಿದೆ ಎಂದು ಬಿಂಬಿಸುತ್ತಿದೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿ ಮನೆ ತೆರವು ಬುಲ್ಡೋಜರ್‌ ಸಂಸ್ಕೃತಿ ನಡೆಯುತ್ತಿದೆ ಎಂಬ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಲೀಂ ಅಹ್ಮದ್, ಕೇರಳ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಿಎಂ ಬುಲ್ಡೋಜರ್‌ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ತೆರವುಗೊಳಿಸಿರುವ ಜಾಗವು ಡಂಪಿಂಗ್‌ ಯಾರ್ಡ್‌. ಅಲ್ಲಿ ಜನರು ಉಳಿದುಕೊಳ್ಳಲು ಯೋಗ್ಯವಲ್ಲದ ಜಾಗ. ಅಲ್ಲಿ ಕೆಲವರು ಕಾನೂನುಬಾಹಿರವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಅಂತಹ ಜಾಗ ತೆರವುಗೊಳಿಸಲಾಗಿದೆ. ಮಾನವೀಯತೆ ದೃಷ್ಟಿಯಿಂದ ಅಲ್ಲಿನ ನಿವಾಸಿಗಳಿಗೆ ಸರ್ಕಾರ ವ್ಯವಸ್ಥೆ ಮಾಡುತ್ತಿದೆ ಎಂದರು.