ಶಿಥಿಲಗೊಂಡ ಅಂಗನವಾಡಿ: ನೂತನ ಕಟ್ಟಡ ನಿರ್ಮಿಸಲು ಒತ್ತಾಯ

| Published : Nov 06 2023, 12:46 AM IST

ಶಿಥಿಲಗೊಂಡ ಅಂಗನವಾಡಿ: ನೂತನ ಕಟ್ಟಡ ನಿರ್ಮಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿಥಿಲಗೊಂಡ ಅಂಗನವಾಡಿ: ನೂತನ ಕಟ್ಟಡ ನಿರ್ಮಿಸಲು ಒತ್ತಾಯ

ಬಾಡಿಗೆ ಕಟ್ಟಡಕ್ಕೆ ವರ್ಗಾವಣೆಗೊಂಡ ಪುಟಾಣಿಗಳು ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಕಡ್ಲೇಮಕ್ಕಿಯ ಮಲೆಯಾಳಿ ಕಾಲೋನಿಯಲ್ಲಿನ ಅಂಗನವಾಡಿ ಕಟ್ಟಡದ ತಳಪಾಯ ಶಿಥಿಲಗೊಂಡಿದ್ದು, ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮಲೆಯಾಳಿ ಕಾಲೋನಿಯಲ್ಲಿ ಕಳೆದ 15 ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡ ನಿರ್ಮಿಸಿದ್ದು, ಇದೀಗ ಕಟ್ಟಡದ ತಳಭಾಗದಲ್ಲಿ ಬಿರುಕು ಬಿಟ್ಟಿದ್ದು, ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಕಟ್ಟಡ ನಿರ್ಮಿಸುವ ಮೊದಲು ಈ ಜಾಗದಲ್ಲಿ ಇದ್ದ ಕುಡಿಯುವ ನೀರಿನ ಹಳೆ ಬಾವಿ ಉಪಯೋಗಕ್ಕೆ ಬಾರದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿ ಅಂಗನವಾಡಿ ಕಟ್ಟಡ ನಿರ್ಮಿಸಿದ್ದಾರೆ. ಇದೀಗ ಹಲವು ವರ್ಷಗಳ ನಂತರ ಬಾವಿಯಿದ್ದ ಜಾಗದಲ್ಲಿ ಭೂಮಿ ಕುಸಿಯುತ್ತಿದ್ದು, ಇದರಿಂದ ಕಟ್ಟಡ ಕುಸಿಯುವ ಸ್ಥಿತಿಗೆ ತಲುಪಿದೆ. ಈ ಆತಂಕದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಹಿರಿಯ ಅಧಿಕಾರಿಗಳು, ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಿ ಅಂಗನವಾಡಿ ಕೇಂದ್ರ ಸಮೀಪದ ರೇಣುಕನಗರದ ಬಾಡಿಗೆ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದರಿಂದ ಕಳೆದ 3 ತಿಂಗಳಿನಿಂದ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.

ಸ್ಥಳೀಯ ಗ್ರಾಪಂ, ಸಿಡಿಪಿಒ ಅಂಗನವಾಡಿ ಕೇಂದ್ರವನ್ನು 3 ತಿಂಗಳಲ್ಲಿ ದುರಸ್ಥಿಗೊಳಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಇದೂವರೆಗೂ ಯಾವುದೇ ಕಾಮಗಾರಿ ಆರಂಭಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಹಾಲಿ ಇರುವ ಅಂಗನವಾಡಿ ಕಟ್ಟಡದ ಕಿಟಕಿ, ಬಾಗಿಲು, ಶೌಚಾಲಯ, ಸ್ಟೋರ್ ರೂಮ್ ಸಹ ಸಂಪೂರ್ಣ ಹಾಳಾಗಿರುವುದರಿಂದ ನಿತ್ಯಇಲ್ಲಿಗೆ ಬರುವ 20 ಮಕ್ಕಳಿ ತೊಂದರೆ ಯಾಗಿದೆ.

ಅಲ್ಲದೆ ರೇಣುಕನಗರದಲ್ಲಿ ಕೇಂದ್ರ ಆರಂಭಿಸಿ ರುವುದರಿಂದ ಪುಟಾಣಿಗಳು ಸುಮಾರು 1ಕಿಲೋ ಮೀ. ದೂರ ನಿತ್ಯವೂ ನಡೆದು ಬರಬೇಕಾಗಿದೆ. ಬಾಡಿಗೆ ಕಟ್ಟಡದಲ್ಲಿ ಸೂಕ್ತ ವಾತಾವರಣವಿಲ್ಲದ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎನ್ನುತ್ತಾರೆ ಕೇಂದ್ರದ ಮೇಲ್ವಿಚಾರಕಿ ಸುನೀತಾ. --ಕೋಟ್ --

ಮಲೆಯಾಳಿ ಕಾಲೋನಿಯಲ್ಲಿ ಹೆಚ್ಚಿನ ಮಕ್ಕಳಿದ್ದರೂ ಅಧಿಕಾರಿಗಳು ಶಿಥಿಲಗೊಂಡ ಅಂಗನವಾಡಿ ಕಟ್ಟಡದ ಬಗ್ಗೆ ಗಮನಹರಿಸಿಲ್ಲ. ಅಂಗನವಾಡಿ ಕೇಂದ್ರ ವರ್ಗಾವಣೆಯಿಂದ ತುಂಬಾ ದೂರ ಪುಟಾಣಿ ಮಕ್ಕಳು ನಡೆದುಕೊಂಡು ಹೋಗಲು ತೊಂದರೆಯಾಗಿದೆ. ಕೂಡಲೇ ಅಧಿಕಾರಿಗಳು ಶಿಥಿಲಗೊಂಡ ಕಟ್ಟಡವನ್ನು ಸಂಪೂರ್ಣ ತೆರವು ಗೊಳಿಸಿ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಿ ಅಂಗನವಾಡಿ ಆರಂಭಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತಾಳದೆ ಅಧಿಕಾರಿಗಳು ಗಮನಹರಿಸಬೇಕು.ಸಿದ್ದಿಕ್, ಖತೀಜ, ರಶೀದ, ಸ್ಥಳೀಯ ಗ್ರಾಮಸ್ಥರು.

ನೂತನ ಕಟ್ಟಡ ನಿರ್ಮಿಸಲು ಇಲಾಖೆಯಲ್ಲಿ ಹೊಸ ಕಟ್ಟಡಕ್ಕೆ ಅಗತ್ಯವಾದ ಸುಮಾರು ರು.15ಲಕ್ಷ ಅನುದಾನ ಲ್ಲ್ಲ. ಇದನ್ನು ತಾಪಂ ಇಓ ಗಮನಕ್ಕೆ ತಂದು ಅಲ್ಲಿ ಯಾವುದಾದರೂ ಅನುದಾನ ದೊರೆತರೆ ನೂತನ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು. ಮೊದಲು ಮಲೆಯಾಳಿ ಕಾಲೋನಿ ಅಂಗನವಾಡಿ ಕೇಂದ್ರಕ್ಕೆ ಆದ್ಯತೆ ನೀಡಿ ಕಾಮಗಾರಿ ಮಾಡಲಾಗುವುದು. ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಬಾಡಿಗೆ ಕಟ್ಟಡ ಅನಿವಾರ್ಯ. - ವೀರೇಶ್,

ಸಿಡಿಪಿಓ, ಎನ್.ಆರ್.ಪುರ.

೦೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಕಡ್ಲೇಮಕ್ಕಿಯ ಮಲೆಯಾಳಿ ಕಾಲೋನಿಯಲ್ಲಿರುವ ತಳಪಾಯ ಶಿಥಿಲಗೊಂಡ ಅಂಗನವಾಡಿ ಕಟ್ಟಡ.