ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕನ್ನಡ ಕಥಾ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಡಾ.ದಿಲೀಪ್ ಎನ್ಕೆ ನೂತನ ಕಥಾ ಸಂಕಲನ ಉತ್ತಮ ರೀತಿ ಮೂಡಿಬಂದಿದ್ದು ಅವರು ಜಿಲ್ಲೆಯ ಉದಯೋನ್ಮುಖ ಬರಹಗಾರರಾಗಿ ಛಾಪು ಮೂಡಿಸಿದ್ದಾರೆ. ಅವರೊಬ್ಬ ಹೊಸ ತಲೆಮಾರಿನ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ ಕಥೆಗಾರ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿಕಟಪೂರ್ವ ನಿರ್ದೇಶಕಿ ಪ್ರೊ.ವಿಜಯಕುಮಾರಿ ಕರಿಕಲ್ ಹೇಳಿದರು.ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಡಾ.ದಿಲೀಪ್ ಎನ್ಕೆ ಅವರ ತಿತ್ತಿಬ್ವಾಸನ ಟೈಟಾನ್ ವಾಚ್ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಕಥಾಸಂಕಲನ ಉತ್ತಮ ರೀತಿ ಮೂಡಿ ಬಂದಿದೆ. ಇಲ್ಲಿನ ಒಂದೊಂದು ಕಥೆಗಳು ಒಂದೊಂದು ಆಯಾಮದಲ್ಲಿವೆ, ಎಲ್ಲಾ ಕಥೆಗಳು ಮೌಲ್ಯಯುತವಾಗಿದ್ದು ಅನೇಕ ತಿರುವು ತೆಗೆದುಕೊಳ್ಳುತ್ತದೆ ಎಂದರು.
ಕನ್ನಡ ಕಥಾ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು ಪಂಜೇ ಮಂಗೇಶರಾಯರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು, ಬಸವರಾಜ ಕಟ್ಟಿಮನಿ, ದೇವನೂರು ಮಹದೇವ, ಲಂಕೇಶ್, ಮೊಗಳ್ಳಿ ಗಣೇಶ್, ಕೃಷ್ಣಮೂರ್ತಿ ಹನೂರು ಹೀಗೆ ಮುಂತಾದ ಕಥೆಗಾರರು ಅಪಾರ ಕೊಡುಗೆ ನೀಡಿದ್ದಾರೆ. ವರ್ತಮಾನದ ಹೊಸ ತಲೆಮಾರಿನ ಕಥೆಗಾರರು ಇಂತಹ ಕಥೆಗಾರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಕಥೆಗಾರರು ಹೆಚ್ಚಿನ ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂದರು.ಯುವ ಬರಹಗಾರ ಬಸವಣ್ಣ ಮೂಕಹಳ್ಳಿ ಮಾತನಾಡಿ, ಆಧುನಿಕತೆ ಹಾಗೂ ತಂತ್ರಜ್ಞಾನ ಅದರಲ್ಲೂ ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿರುವ ಯುವಜನತೆ ಓದುವ ಹವ್ಯಾಸವನ್ನು ದೂರವಾಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ತಲೆಮಾರಿನ ಕತೆಗಾರರು ಯುವಜನತೆಯನ್ನು ಮುಖ್ಯವಾಗಿಸಿಕೊಂಡು ತಮ್ಮದೇ ಆದ ಸಂಯೋಜನೆ ಕಾಪಾಡಿಕೊಂಡು ಅದನ್ನು ವರ್ತಮಾನದ ವಿಷಯಗಳ ನಡುವೆ ಸಂಯೋಜಿಸಿ ಕಥೆಗಳನ್ನ ರಚಿಸಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಂಕನಪುರ ಮಹಾದೇವ ಮಾತನಾಡಿ, ಹೊಸ ತಲೆಮಾರಿನ ಕಥೆಗಾರರು ತಮ್ಮ ಹಿಂದಿನ ಕಥೆಗಾರರ ಕಥೆಗಳನ್ನು ಹೆಚ್ಚು ಅಧ್ಯಯನ ಮಾಡಿ ಅಲ್ಲಿನ ತಂತ್ರಗಳನ್ನು ಹಾಗೂ ವಿನ್ಯಾಸ ಕ್ರಮಗಳನ್ನು ರೂಢಿಸಿಕೊಳ್ಳಬೇಕು, ಮಲೆಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಕಥನ ರೂಪಕಗಳನ್ನು ಅಧ್ಯಯನ ಮಾಡಿದರೆ ಅವರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ನಮ್ಮ ನೆಲದ ಪರಂಪರೆಯನ್ನು ತಮ್ಮ ಕಥೆಗಳಲ್ಲಿ ಜೀವಂತವಾಗಿರಿಸಿಕೊಳ್ಳುವ ಕಾರ್ಯ ಇತ್ತೀಚಿನ ಕಥೆಗಾರರಲ್ಲಿ ಆಗಬೇಕಿದೆ ದಿಲೀಪ್ ಅವರ ಕೆಲವು ಕಥೆಗಳಲ್ಲಿ ಇಂತಹ ಪ್ರಯೋಗಗಳಿವೆ ಎಂದರು.ಈ ಸಂದರ್ಬದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಲೆಗ್ಸಾಂಡರ್, ಕಥೆಗಾರ ದಿಲೀಪ್ ಎನ್ಕೆ, ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಕುಮಾರ ಸರಗೂರು, ಪುಸ್ತಕ ಮಳಿಗೆ ಗೋವಿಂದರಾಜು, ಸಿಎಂ ನರಸಿಂಹಮೂರ್ತಿ ಇನ್ನಿತರರಿದ್ದರು.