ಸಾಧನೆಗೆ ಶ್ರದ್ಧೆ, ಶ್ರಮ ಅತ್ಯವಶ್ಯ: ಡಿ.ಜಿ.ಶಾಂತನಗೌಡ

| Published : Jul 07 2024, 01:24 AM IST

ಸಾರಾಂಶ

ಹೊನ್ನಾಳಿ ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭವನ್ನು ಶಾಸಕ ಡಿ.ಜಿ.ಶಾಂತನಗೌಡ ಅವರು ದೀಪ ಬೆಳಗಿಸಿ ಚಾಲನೆಗೊಳಿಸಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಶ್ರದ್ಧೆ, ಶ್ರಮಗಳಿಂದ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳೂ ಹೆಚ್ಚಿನ ಆಸಕ್ತಿ ಮತ್ತು ಶ್ರದ್ಧೆಯಿಂದ ಕಲಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಜೀವನ ಕಂಡುಕೊಳ್ಳಬಹುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಅವರು ಹೊನ್ನಾಳಿ ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ 2024-25ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಾಗಾರ, ಕಾಲೇಜಿ ಮುಗಿಸಿ ಹೊರಹೋಗುವತ್ತಿರುವ ವಿದ್ಯಾರ್ಥಿಗಳಿಗೆ ಬೀಳ್ಕೂಡುಗೆ, ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ ಎನ್ಎಸ್ಎಸ್ ಘಟಕ ಹಾಗೂ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆಗೊಳಿಸಿ ಮಾತನಾಡಿದರು.

ಸಾಮಾನ್ಯವಾಗಿ ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದಾಗಿ ಬಿಎ, ಬಿಕಾಂ, ಬಿಎಸ್ಸಿ ಯಂತಹ ಪದವಿ ತರಗತಿಳಿಗೆ ಮಾತ್ರ ಸೇರುವುದುಂಟು, ಆದರೆ ಐಟಿಐ, ಡಿಪ್ಲೊಮಾಗಳಂತಹ ತಾಂತ್ರಿಕ ಶಿಕ್ಷಣ ಪಡೆಯುವ ಕಡೆಗೂ ಕೂಡ ಗಮನ ಹರಿಸಬೇಕು. ತಾಂತ್ರಿಕ ಶಿಕ್ಷಣ ಪಡೆದವರಿಗೆ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಹೊರ ಪ್ರದೇಶಗಳಲ್ಲಿ ಕೂಡ ವಿಪುಲವಾದ ಉದ್ಯೋಗಳ ಅವಕಾಶ ಹೆಚ್ಚಾಗಿರುತ್ತೆವೆ ಎಂದರು.

ಮಾತೃ ಭಾಷೆ ಕನ್ನಡದ ಬಗ್ಗೆ ಗೌರವ, ಅಭಿಮಾನವಿರಬೇಕು. ಆದರೆ ರಾಜ್ಯದ ಹೊರಪ್ರದೇಶಗಳಲ್ಲಿ ಉದ್ಯೋಗ ಮಾಡಬೇಕೆಂದರೆ ಹಾಗೂ ತಾಂತ್ರಿಕವಾಗಿ ಹೆಚ್ಚಿನ ಜ್ಞಾನ ಸಂಪಾದನೆಗೆ ಮಾತೃ ಭಾಷೆ ಜೊತೆಗೆ ಇಂಗ್ಲಿಷ್‌ ಭಾಷೆ ಕಲಿತರೆ ಜೀವನಕ್ಕೆ ತುಂಬಾ ಸಹಕಾರಿಯಾಗುತ್ತದೆ. 2021-22ರಿಂದ ಈ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಗಳು ಆರಂಭಗೊಂಡು ಇಂದು ಇಲ್ಲಿನ ಪ್ರಾಂಶುಪಾಲರು, ಉಪನ್ಯಾಸಕರ ಶ್ರಮದಿಂದ ಯಶಶ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದರು.

ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಿಂದ ವಿವಿಧ ಹಂತಗಳ ತಾಂತ್ರಿಕ ಶಿಕ್ಷಣ ಪಡೆದ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನ ರಾಜ್ಯ ಹಾಗೂ ಹೊರಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದರೆ ತಾಂತ್ರಿಕ ಶಿಕ್ಷಣಕ್ಕೆ ಔದ್ಯೋಗಿಕ ಕ್ಷೇತ್ರದಲ್ಲಿ ಉದ್ಯೋಗಳ ಹೆಚ್ಚಿನ ಅವಕಾಶಗಳು ಇರುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರ ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕರು, ಕಾಲೇಜಿಗೆ ಕಾಂಪೌಂಡ್‌ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶಾಂತಕುಮಾರ್ ನಾಯ್ಕ ಮಾತನಾಡಿ, ಸುಂಕದಕಟ್ಟೆ ಗ್ರಾಮದ 5 ಎಕರೆ ಪ್ರದೇಶದಲ್ಲಿ ಈ ಸರ್ಕಾರಿ ಕಾಲೇಜು ಇದ್ದು ಇನ್ನೂ ಕೂಡ ಕೆಲ ಮೂಲಭೂತ ಸೌಕರ್ಯಗಳ ಅಗತ್ಯವಿದ್ದು ಈ ಬಗ್ಗೆ ಶಾಸಕರು ಪೂರೈಸಿಕೊಡಬೇಕು ಎಂದು ಮನವಿ ಮಾಡಿದರು. ಪ್ರಸ್ತುತ ಕಾಲೇಜಿನಲ್ಲಿ ಆಟೋಮೋಬೈಲ್ ಮತ್ತು ಅಲ್ಟರ್ನೆಟ್ ಎನರ್ಜಿ ವಿಭಾಗಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರಬಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಎಸ್.ಆರ್.ಮಂಜುನಾಥ ಭಾಗವಹಿಸಿದ್ದರು.

ಕಾಲೇಜಿನ ಉಪನ್ಯಾಸಕ ಟಾಕಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಆರಂಭದಲ್ಲಿ ಕಾಲೇಜಿನಲ್ಲಿ 63 ಜನ ವಿದ್ಯಾರ್ಥಿಗಳಿದ್ದು ಇದೀಗ 190 ಜನ ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 37 ಜನ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಉಪನ್ಯಾಸಕ ಪ್ರಕಾಶ್ ಕುಂಬಾರ್ ಮತ್ತು ಜಿ.ಆರ್.ಮಾಲತಿ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕರಾದ ಮಹಾಲಿಂಗಪ್ಪ ಟಿ.ಎಲ್, ಅವರು ತಾಂತ್ರಿಕ ಶಿಕ್ಷಣ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದೊಡ್ಡ ಸ್ವಾಮಿ ಎಚ್.ಚೇತನ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.