ಸಾರಾಂಶ
ವಿದ್ಯಾರ್ಥಿಗಳಿಗೆ ಶ್ರದ್ಧೆ ಮುಖ್ಯ, ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದು ಇನ್ನೂ ಮುಖ್ಯ.
ವಾರ್ಷಿಕ ಸ್ನೇಹ ಸಮ್ಮೇಳನ, ಗೌರವ ಸನ್ಮಾನ, ಪ್ರತಿಭಾ ಪುರಸ್ಕಾರ, ವಿವಿಧ ಚಟುವಟಿಕೆಗಳ ಸಮಾರೋಪ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿವಿದ್ಯಾರ್ಥಿಗಳಿಗೆ ಶ್ರದ್ಧೆ ಮುಖ್ಯ, ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದು ಇನ್ನೂ ಮುಖ್ಯ. ವೇಳೆಯ ಮಹತ್ವ, ವಿಶ್ವಾಸ, ಗೌರವ ಇಟ್ಟುಕೊಳ್ಳದೆ ಇದ್ದರೆ ಒಬ್ಬ ಯಶಸ್ವಿ ಪ್ರಜೆ ಆಗಲು ಸಾಧ್ಯವಿಲ್ಲ ಎಂದು ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ ಹೇಳಿದರು.
ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ, ಗೌರವ ಸನ್ಮಾನ, ಪ್ರತಿಭಾ ಪುರಸ್ಕಾರ, ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ನಮ್ಮ ಯುವಕರಲ್ಲಿ ಇಂದು ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ತಂದೆ- ತಾಯಿಗಳನ್ನ ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕಿದೆ. ಪಾಲಕರು ಮಕ್ಕಳನ್ನ ವಿದ್ಯಾಂತರನ್ನಾಗಿ ಅಷ್ಟೇ ಮಾಡದೇ ಸಂಸ್ಕಾರವಂತರನ್ನಾಗಿಯೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಹಸೀಲ್ದಾರ ಸಂತೋಷ ಹಿರೇಮಠ ಮಾತನಾಡಿ, ಸಾರ್ಥಕ ದುಡಿಮೆಗೆ ಯುವಕರು ಮುಂದಾಗಬೇಕಿದೆ. ಕೇವಲ ಕ್ಷಣಿಕ ಜೀವನಕ್ಕೆ ಎಂದಿಗೂ ಮಹತ್ವ ಕೊಡಬೇಡಿ, ಕೇವಲ ಕನಸು ಕಂಡರೆ ಸಾಲದು ಆ ಕನಸ್ಸನ್ನ ನನಸು ಮಾಡಲು ಶ್ರಮಿಸಬೇಕು ಎಂದರು.ವಿದ್ಯಾರ್ಥಿಗಳಾದ ಸಂತೋಷ ವಡ್ಡರಭೋವಿ, ಲಿಂಗೇಶ ವರ್ಧಿ, ಶ್ವೇತಾ ಕುಡವಕ್ಕಲಗೇರ, ತೇಜಶ್ವಿನಿ ಹಳೆಮನಿ ಅವರಿಗೆ ಆದರ್ಶ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳೆಹೊನ್ನೂರ ರಂಭಾಪುರಿ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಬಿ. ಹಿರೇಮಠ ವಹಿಸಿದ್ದರು. ಪದವಿ ಪ್ರಾಚಾರ್ಯ ಡಾ. ಬಿ.ವೈ. ತೊಂಡಿಹಾಳ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಎಫ್.ಎಸ್. ಶಿವಣ್ಣವರ, ಪ್ರೊ. ಎನ್.ಎಸ್. ತೀರ್ಥ, ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಪ್ರೊ. ಶಿವಯ್ಯ ಪೂಜಾರ, ಒಕ್ಕೂಟಗಳ ಕಾರ್ಯಾಧ್ಯಕ್ಷರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.