ಸಾರಾಂಶ
16 ನೇ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಮಾತುಕನ್ನಡಪ್ರಭ ವಾರ್ತೆ ಬೇಲೂರು
ಸರ್ಕಾರದ ಮಹತ್ವದ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಬೇಕು ಎಂದು ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಸರ್ಕಾರಕ್ಕೆ ಒತ್ತಾಯ ಮಾಡಿದರು.16 ನೇ ಅಧಿವೇಶನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ಮೇಲೆ ಸರ್ಕಾರದ ಮಹತ್ವದ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಬಗ್ಗೆ ಮಾತನಾಡಿ, ನೀರಾವರಿ ಯೋಜನೆಗಳು ರೈತರ ಮತ್ತು ಸಾರ್ವಜನಿಕರ ನಾಡಿ ಮಿಡಿತವಾಗಿರುತ್ತದೆ. ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆಯಂತಹ ವೈವಿಧ್ಯಮಯವಾದ ಪ್ರದೇಶಗಳನ್ನು ಒಳಗೊಂಡಿರುವ ಕ್ಷೇತ್ರ ನಾನು ಪ್ರತಿನಿಧಿಸುತ್ತಿರುವ ಬೇಲೂರು ವಿಧಾನಸಭಾ ಕ್ಷೇತ್ರವಾಗಿದ್ದು, ನನ್ನ ಕ್ಷೇತ್ರದ ರೈತರ ಬಹು ಮುಖ್ಯ ಬೆಳೆಗಳಾದ ತೆಂಗು, ಅಡಿಕೆ ಮತ್ತು ಇತರೆ ವಾಣಿಜ್ಯ ಬೆಳೆಗಳಾಗಿದ್ದು ಸಮರ್ಪಕವಾದ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಉತ್ತಮ ಬೆಳೆಗಳನ್ನು ಪಡೆಯಲು ಸಾಧ್ಯವಾಗದೇ ರೈತರು ಕಂಗಲಾಗಿರುತ್ತಾರೆ ಎಂದು ಹೇಳಿದರು.
‘ಸರ್ಕಾರದ ಮಹತ್ವದ ಯೋಜನೆಯಾದ ಎತ್ತಿನಹೊಳೆ ಯೋಜನೆ ನನ್ನ ಕ್ಷೇತ್ರದ ಬಿಕ್ಕೋಡು, ಮಾದಿಹಳ್ಳಿ, ಹಳೇಬೀಡು, ಜಾವಗಲ್ ಹೋಬಳಿಗಳಲ್ಲಿ ಹಾದು ಹೋಗಿದೆ. ಹಳೇಬೀಡು, ಮಾದಿಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ರಣಘಟ್ಟ ಯೋಜನೆಯು ಈ ಭಾಗದ ರೈತರ ಬದುಕಿನಲ್ಲಿ ಒಂದಷ್ಟು ಭರವಸೆಯನ್ನು ಮೂಡಿಸಿದೆ. ಅಂತಹ ಭರವಸೆಯನ್ನು ರೈತರಲ್ಲಿ ಮೂಡಿಸಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಅನೇಕ ವರ್ಷಗಳಿಂದ ನಡೆಯುತ್ತಿದ್ದರೂ ಇದುವರೆಗೂ ಪೂರ್ಣಗೊಳ್ಳದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.‘ನನ್ನ ವಿಧಾನಸಭಾ ಕ್ಷೇತ್ರದ ರೈತರುಗಳ ಬದುಕು ಹಸನಾಗಬೇಕೆಂದರೆ, ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲವನ್ನು ಹೆಚ್ಚು ಮಾಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಎತ್ತಿನ ಹೊಳೆ ಮತ್ತು ರಣಘಟ್ಟ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರನ್ನು ತುಂಬಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡುಬೇಕಿದೆ. ಎತ್ತಿನಹೊಳೆ ಯೋಜನೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ರಸ್ತೆಯ ಜತೆಗೆ ಮೂಲಭೂತ ಸೌಲಭ್ಯಗಳನ್ನು ನೀಡುವ ಸಲುವಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಎತ್ತಿನಹೊಳೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು, ಯೋಜನೆಯಿಂದ ಹಾಳಾದ ರಸ್ತೆಗಳಿಗೆ, ಮೂಲಭೂತ ಸೌಲಭ್ಯಗಳಿಗೆ ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಹಾಗೂ ರಣಘಟ್ಟ ನೀರಾವರಿ ಯೋಜನೆಯನ್ನು ವೇಗದಲ್ಲಿ ಮುಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ 16 ನೇ ಅಧಿವೇಶನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ಮೇಲೆ ಎತ್ತಿನಹೊಳೆ ಯೋಜನೆಯ ಬಗ್ಗೆ ಶಾಸಕ ಸುರೇಶ್ ಮಾತನಾಡಿದರು.