ಸಾರಾಂಶ
ಪ್ರಶಸ್ತಿ ಪ್ರದಾನ ಸಮಾರಂಭ ಆ.31ರಂದು ಮಧ್ಯಾಹ್ನ 2 ರಿಂದ ಕಾಸರಗೋಡು ಎಡನೀರು ಮಠದಲ್ಲಿ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಡಬ ಸಂಸ್ಮರಣಾ ಸಮಿತಿ ವತಿಯಿಂದ ನೀಡುವ ‘ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ’ಗೆ ಯಕ್ಷಗಾನ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ಆಯ್ಕೆಯಾಗಿದ್ದಾರೆ.ಕಡಬ ಸಂಸ್ಮರಣಾ ಸಮಿತಿ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭ ಆ.31ರಂದು ಮಧ್ಯಾಹ್ನ 2 ರಿಂದ ಕಾಸರಗೋಡು ಎಡನೀರು ಮಠದಲ್ಲಿ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಉದ್ಘಾಟಿಸುವರು. ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಸಂಸ್ಮರಣಾ ಭಾಷಣ ಮಾಡುವರು. ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಬಳಿಕ ಪ್ರಸಿದ್ಧ ಕಲಾವಿದರಿಂದ ಸುರಭಿಜಾತೆ ತಾಳಮದ್ದಳೆ, ಶ್ರೀರಾಮ ದರ್ಶನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿ ಹೆಸರು ಗಳಿಸಿ ಹಿರಿಯ ಕಲಾವಿದರಾಗಿ ಸೇವೆ ಮಾಡಿದ ‘ಪದ್ಯಾಣ - ಕಡಬ’ ಜೋಡಿ ಎಂದೇ ಪ್ರಸಿದ್ಧಿ ಪಡೆದ ಕಡಬ ನಾರಾಯಣ ಆಚಾರ್ಯ ಈಗಿಲ್ಲ. ಅತೀ ಸಣ್ಣ ಪ್ರಾಯದಲ್ಲೇ ಅದ್ವೀತಿಯ ಮದ್ದಳೆವಾದಕರಾಗಿ ಯಕ್ಷರಂಗಕ್ಕೆ ತನ್ನದೇ ಆದ ಛಾಪನ್ನು ಮೂಡಿಸಿ ಇಹಲೋಕ ತ್ಯಜಿಸಿದ ಅವರ ಪುತ್ರ ಕಡಬ ವಿನಯ ಆಚಾರ್ಯ ಅವರ ಹೆಸರನ್ನು ಕೂಡ ಶಾಶ್ವತವಾಗಿರಿಸಲು ಪ್ರತೀ ವರ್ಷವೂ ಸಂಸ್ಮರಣೆ ಹಾಗೂ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ‘ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ’ ನೀಡಲಾಗುತ್ತಿದೆ.
ಸಮಿತಿ ಗೌರವಾಧ್ಯಕ್ಷ ಜಿ.ಟಿ. ಆಚಾರ್ಯ ಮುಂಬೈ, ಸಮಿತಿ ಕಾರ್ಯದರ್ಶಿ ಗಿರೀಶ್ ಕಾವೂರು, ಕೋಶಾಧಿಕಾರಿ ಭಾಸ್ಕರ ಆಚಾರ್ಯ ಅಂಡಿಂಜೆ, ಲೋಕೇಶ ಕಟೀಲು ಇದ್ದರು.