ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಏಜೆಂಟ್: ಗೋವಿಂದಗೌಡ್ರ

| Published : Mar 29 2024, 12:53 AM IST

ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಏಜೆಂಟ್: ಗೋವಿಂದಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ದಿಂಗಾಲೇಶ್ವರ ಶ್ರೀಗಳು ಸದಾ ಸುದ್ದಿಯಲ್ಲಿ ಇರಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧಾರವಾಡದ ಟಿಕೆಟ್ ಬದಲಾವಣೆ ಮಾಡಬೇಕು ಎನ್ನುವುದು ಸರಿಯಲ್ಲ

ಗದಗ: ಶಿರಹಟ್ಟಿಯ ಫಕ್ಕಿರೇಶ್ವರ ಮಠದ ಉತ್ತರಾಧಿಕಾರಿ ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಏಜೆಂಟ್ ಇದ್ದಂತೆ. ಅವರು ರಾಜಕೀಯ ಬಿಟ್ಟು ಭಕ್ತರ ಉದ್ದಾರದ ಕಡೆ ಗಮನ ಹರಿಸಲಿ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀಗಳು ಸದಾ ಸುದ್ದಿಯಲ್ಲಿ ಇರಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧಾರವಾಡದ ಟಿಕೆಟ್ ಬದಲಾವಣೆ ಮಾಡಬೇಕು ಎನ್ನುವುದು ಸರಿಯಲ್ಲ. ಸ್ವಾಮೀಜಿಗಳಿಗೆ ರಾಜಕಾರಣ ಶೋಭೆ ತರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಎಂದಾಕ್ಷಣ ₹15 ಲಕ್ಷ ನೆನಪಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳುತ್ತಾರೆ. ಆದರೆ, ನಮಗೆ ಕಾಂಗ್ರೆಸ್ ಅಂದರೆ ನೆನಪಿಗೆ ಬರುವುದು ಭ್ರಷ್ಟಾಚಾರ, ಜಾತಿ-ಜಾತಿಗಳನ್ನು ವಿಭಜನೆ ಮಾಡುವುದು, ಬರಗಾಲ ಬಂದರೂ ರೈತರ ಹಿತ ಕಾಪಾಡದಿರುವುದು, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಉಪಯೋಗಿಸಿದ್ದು, ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ತಮಿಳುನಾಡಿಗೆ ನೀರು ಹರಿಸಿದ್ದು ನೆನಪಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ 24x7 ನೀರಿಗೆ ₹ 300 ಕೋಟಿ ಹಣ ದೋಚಿದ್ದು, ಜಿಲ್ಲೆಯಲ್ಲಿನ ಕೈಗಾರಿಕೆಗಳನ್ನು ಮುಚ್ಚಿದ್ದು, ಜಿಲ್ಲೆಯ ರೈತರ ಕಷ್ಟಗಳು ಎಂದರೆ ನಮಗೆ ಸಚಿವ ಎಚ್.ಕೆ. ಪಾಟೀಲ ನೆನಪಾಗುತ್ತಾರೆ. ಗರಿಬಿ ಹಠಾವೋ ಎನ್ನುವುದನ್ನು 70 ವರ್ಷದಿಂದ ಹೇಳುತ್ತಿದ್ದಾರೆ. ಆದರೆ, ಇಂದಿಗೂ ಬಡತನ ದೇಶದಿಂದ ಹೋಗಿಲ್ಲ. ಸಚಿವ ಶಿವರಾಜ ತಂಗಡಗಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ ಎನ್ನುತ್ತಾರೆ. ಆದರೆ, 70 ವರ್ಷದಿಂದ ಬಡತನ ಹೋಗಲಾಡಿಸದ ನಿಮಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಯಸ್ಸಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳುತ್ತಾರೆ. ಆದರೆ ಎಚ್.ಕೆ. ಪಾಟೀಲ್ ಅವರಿಗೆ ವಯಸ್ಸಾಗಿಲ್ಲವೇ? ಈ ಹಿಂದೆ ಸಲೀಂ ಅಹ್ಮದ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಇತ್ತ ಅವರ ಸಹೋದರ ಡಿ.ಆರ್. ಪಾಟೀಲ್ ಅವರಂತೂ ರಾಜಕೀಯ ನಿವೃತ್ತಿ ಘೋಷಿಸುವ ಹಾಗೆ ಮಾಡಿದ್ದಾರೆ. ಈಗ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಲೋಕಸಭಾ ಕ್ಷೇತ್ರಕ್ಕೆ ತಂದಿದ್ದಾರೆ. ಅವರನ್ನು ಮೂಲೆಗುಂಪು ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎನ್ನುತ್ತಿದ್ದರು. ಆದರೆ, ಈಗ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದೆ. ಕಾಂಗ್ರೆಸ್ ದ್ವಿಮುಖ ನೀತಿ ಈಗ ರಾಜ್ಯದ ಜನತೆಗೆ ಅರ್ಥವಾಗಿದೆ. ಸಿದ್ದರಾಮಯ್ಯ ಅವರು ಯಾರೋ ಕಟ್ಟಿದ ಹುತ್ತದಲ್ಲಿ ಬಂದು ವಾಸವಾಗಿದ್ದಾರೆ ಎಂದು ಸಿಎಂ ವಿರುದ್ದ ಹರಿಹಾಯ್ದರು.

ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಸಂಶಿ, ಬಸವರಾಜ ಅಪ್ಪಣ್ಣನವರ, ಜೊಸೆಫ್‌ ಉದೋಜಿ, ಆನಂದ ಹಂಡಿ, ಪ್ರಫುಲ್ ಪುಣೇಕರ್, ಖಾಜೆಸಾಬ್ ಕಾಗದಗಾರ, ಕೆ.ಎಫ್. ದೊಡ್ಡಮನಿ ಉಪಸ್ಥಿತರಿದ್ದರು.