ದಿಂಗಾಲೇಶ್ವರ ಶ್ರೀ ಧಾರವಾಡದಿಂದ ಪಕ್ಷೇತರ ಸ್ಪರ್ಧೆ

| Published : Apr 09 2024, 12:57 AM IST / Updated: Apr 09 2024, 05:16 AM IST

dingaleshwara shree

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದ ಶಿರಹಟ್ಟಿಯ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಧರ್ಮಯುದ್ಧ ನಡೆಸಲು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

 ಬೆಂಗಳೂರು/ಹುಬ್ಬಳ್ಳಿ :  ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದ ಶಿರಹಟ್ಟಿಯ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಧರ್ಮಯುದ್ಧ ನಡೆಸಲು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಹಲವು ಮಠಾಧೀಶರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ‘ಕಾಂಗ್ರೆಸ್‌ ಮತ್ತು ಬಿಜೆಪಿ ಚುನಾವಣೆ ಫಿಕ್ಸಿಂಗ್‌ ಮಾಡಿಕೊಂಡಿವೆ. ಆದ್ದರಿಂದ ತಾವು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಮತದಾರರು ತೀರ್ಮಾನಿಸಿದ್ದಾರೆ. ಜೋಶಿ ಅವರ ವಿರುದ್ಧ ಕಣಕ್ಕಿಳಿಯುತ್ತಿದ್ದು ಇದು ಸ್ವಾಭಿಮಾನದ ಧರ್ಮ ಯುದ್ಧವಾಗಿದೆ. ಗುರಿ ಮುಟ್ಟುವವರೆಗೂ ಹೂಮಾಲೆ ಧರಿಸುವುದಿಲ್ಲ ಎಂದು ಶಪಥಗೈದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳು ಬಸವಣ್ಣ ಅವರ ಹೆಸರನ್ನು ಮತಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ ಅವರ ತತ್ವಗಳನ್ನು ಪಾಲಿಸುತ್ತಿಲ್ಲ. ಮತ್ತೊಂದೆಡೆ, ಎಲ್ಲ ಸಮಾಜಗಳೂ ಬಿಜೆಪಿಯಿಂದ ನೋವು ಅನುಭವಿಸಿವೆ ಎಂದರು.

ದಿಂಗಾಲೇಶ್ವರ ಶ್ರೀಗೆ ಕಾಂಗ್ರೆಸ್ ಟಿಕೆಟ್‌ ಬಗ್ಗೆ ಚರ್ಚಿಸಿ ನಿರ್ಧಾರ: ಡಿಕೆಶಿ

‘ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಆನಂದ್‌ ಅಸೂಟಿ ಅವರಿಗೆ ಈಗಾಗಲೇ ಬಿ-ಫಾರಂ ನೀಡಿದ್ದೇವೆ. ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರೊಂದಿಗೆ ನಾವು ಮಾತನಾಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಈ ಬಗ್ಗೆ ತೀರ್ಮಾನ ಮಾಡಬೇಕಿದ್ದು, ಸ್ವಾಮೀಜಿಗಳ ವಿಚಾರ ಮೊದಲೇ ಗೊತ್ತಿದ್ದರೆ ನಿರ್ಧಾರ ಮಾಡಲು ಸುಲಭವಾಗುತ್ತಿತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.ಧಾರವಾಡದಿಂದ ನಾನು ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅವಕಾಶ ಬಂದರೆ ಮತದಾರರ ಮುಂದೆ ಹೋಗಿ ನಿರ್ಣಯ ಮಾಡುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು.ಈ ಬಗ್ಗೆ ನೀವು ಸ್ವಾಮೀಜಿ ಅವರನ್ನು ಸಂಪರ್ಕಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಈ ಬಗ್ಗೆ ಸಧ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು’ ಎಂದು ಹೇಳಿದರು.

ಶ್ರೀಗಳ ಹೇಳಿಕೆ ನನಗೆ ಆಶೀರ್ವಾದ ಇದ್ದಂತೆ-ಜೋಶಿ

ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ದೇಶ, ಅಭಿವೃದ್ಧಿ, ನಾವು ಮಾಡಿರುವ ಕೆಲಸದ ಮೇಲೆ ನಡೆಯುತ್ತದೆ. ದಿಂಗಾಲೇಶ್ವರ ಸ್ವಾಮೀಜಿಗಳ ಸ್ಪರ್ಧೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ನಿಲ್ಲುವ ಹಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದಿಂಗಾಲೇಶ್ವರ ಶ್ರೀಗಳ ಹೇಳಿಕೆಗಳು ನನಗೆ ಆಶೀರ್ವಾದ ಇದ್ದಂತೆ. ಕಳೆದ ಹತ್ತು ವರ್ಷದಲ್ಲಿ ಅಂದರೆ, ಮೋದಿ ಅವರು ಬರುವ ಮುಂಚೆ ದೇಶ ಹೇಗಿತ್ತು, ಈಗ ಹೇಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದರು.ಚುನಾವಣೆಯಲ್ಲಿ ಲಿಂಗಾಯತ ಮತಗಳು ಒಡೆಯುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇಲ್ಲಿ ಯಾವುದೇ ಜಾತಿ ಆಧಾರದ ಮೇಲೆ ಚುನಾವಣೆ ಆಗುವುದಿಲ್ಲ. ಜನ ದೇಶದ ಅಭಿವೃದ್ಧಿ ಹಾಗೂ ಸದೃಢ ನಾಯಕತ್ವದ ಆಧಾರದ ಮೇಲೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

 ನಮ್ಮ ದೇಶ 5ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ದೇಶದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವ ಬೇಕೋ? ರಾಹುಲ್ ಗಾಂಧಿ ಹಾಗೂ ಇತ್ಯಾದಿ ನೇತೃತ್ವ ಬೇಕೋ? ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಇಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯ ನೋಡಿಕೊಂಡು ಜನ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು