ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ನೇರ ಉದ್ಯೋಗ: ಶಾಸಕ ಮಾನೆ

| Published : Mar 04 2024, 01:17 AM IST

ಸಾರಾಂಶ

ಈಗ ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ನೇರ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಹಾನಗಲ್ಲಿನಲ್ಲಿ ಉದ್ಯೋಗ ಸಮೃದ್ಧಿ ಕೇಂದ್ರ ಉದ್ಘಾಟನೆಕನ್ನಡಪ್ರಭ ವಾರ್ತೆ ಹಾನಗಲ್ಲ

ಹಾನಗಲ್ಲ ತಾಲೂಕಿನ ಅಭಿವೃದ್ಧಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹಾತ್ವಾಕಾಕ್ಷಿ ಯೋಜನೆಗೆ ಹತ್ತು ಹಲವು ಶೈಕ್ಷಣಿಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದ್ದು, ಈಗ ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ನೇರ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲಿನಲ್ಲಿ ಹುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಹಾನಗಲ್ಲ ತಾಲೂಕಿನ ಯುವ ಉದ್ಯೋಗಾರ್ಥಿಗಳಿಗಾಗಿ ಮಾಹಿತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ಯೋಗ ಸಮೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲ ಉದ್ದೇಶವೇ ಬದುಕು ಕಟ್ಟಿಕೊಳ್ಳುವ ಉದ್ಯೋಗವನ್ನು ಪಡೆದುಕೊಳ್ಳುವುದು. ಇತ್ತೀಚಿನ ದಿನಗಳಲ್ಲಿ ಉದ್ಯಮಗಳಲ್ಲಿ ಹೆಚ್ಚು ಉದ್ಯೋಗಗಳಿಗೆ ಅವಕಾಶವಿದೆ. ಅಂತಹ ಉದ್ದಿಮೆದಾರರನ್ನು ಸಂಪರ್ಕಿಸಿ ಶಿಕ್ಷಣ ಸಾಮರ್ಥ್ಯವನ್ನು ಆಧರಿಸಿದ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ, ಮಾಹಿತಿ, ಸೌಲಭ್ಯ ಒದಗಿಸುವುದು ಈ ಸಮೃದ್ಧಿ ಕೇಂದ್ರದ ಬದ್ಧತೆಯಾಗಿದೆ. ವಿದ್ಯಾರ್ಥಿಗಳಿಗೆ ಶಿಷ್ಯ ವೇತನಕ್ಕೂ ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶೈಕ್ಷಣಿಕ ಉನ್ನತಿಗಾಗಿ ಸಮರೋಪಾದಿಯಲ್ಲಿ ಕಾರ್ಯ ನಡೆದಿದೆ. ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ಯುವಕರು ಪಾಲಕರಿಗೆ ಹೊರೆಯಾಗದಂತೆ ಉತ್ತಮ ಶಿಕ್ಷಣ ಪಡೆದು ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಯಲ್ಲಿ ಪಾಲುದಾರರಾಗಬೇಕು. ಎಲ್ಲರ ಸಹಕಾರದಿಂದ ಎಲ್ಲರಿಗೂ ಒಳ್ಳೆಯದಾಗುವ ಕಾರ್ಯದಲ್ಲಿ ನಾವೆಲ್ಲ ಕೈ ಜೋಡಿಸೋಣ ಎಂದರು.

ತಹಸೀಲ್ದಾರ ಎಸ್. ರೇಣುಕಮ್ಮ ಮಾತನಾಡಿ, ಯುವಕ-ಯುವತಿಯರು ಓದಿನಲ್ಲಿ ಉತ್ಸಾಹ ಕಳೆದುಕೊಳ್ಳಬಾರದು. ಭವಿಷ್ಯವನ್ನು ರೂಪಿಸಿಕೊಳ್ಳಲು ಒಳ್ಳೆಯ ಗುರಿಗಾಗಿ ಪರಿಶ್ರಮದ ಪಯಣದಲ್ಲಿರಬೇಕು. ಕುಟುಂಬದ ಸೌಖ್ಯಕ್ಕಾಗಿ ಸದಾ ಸೌಹಾರ್ದ ಭಾವ ಹೊಂದಿ ಪಾಲಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಜಗತ್ತು ವಿಶಾಲವಾಗಿದೆ. ಅದರೆ ಅದು ಈಗ ತಂತ್ರಜ್ಞಾನದಿಂದಾಗಿ ತೀರ ಹತ್ತಿರವೂ ಆಗಿದೆ. ಪರಿವರ್ತನ ಕಲಿಕಾ ಕೇಂದ್ರದ ಮೂಲಕ ನಡೆಯುತ್ತಿರುವ ಶಿಕ್ಷಣ ಉದ್ಯೋಗದ ಅವಕಾಶಗಳನ್ನು ಈ ತಾಲೂಕಿನ ಯುವ ಸಮುದಾಯ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಬಡವರ ಬದುಕನ್ನು ಹಸನಗೊಳಿಸುವ ಶೈಕ್ಷಣಿಕ ಕಾರ್ಯಗಳ ಜತೆಗೆ ಉದ್ಯೋಗದ ಅವಕಾಶಕ್ಕೂ ಪರಿವರ್ತನ ಕಲಿಕಾ ಕೇಂದ್ರ ಮಂದಾಗಿದೆ. ಇದು ಅತ್ಯಂತ ಅಭಿನಂದನೀಯ ಕಾರ್ಯ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಉದ್ಯೋಗಕ್ಕೆ ಹೆಚ್ಚು ಆದ್ಯತೆ ಇರಲಿ ಎಂದರು.

ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪುರ, ನಿರ್ದೇಶಕ ಸಂತೋಷ ಅಪ್ಪಾಜಿ, ಅನಂತ ಸಿಡೇನೂರ ಉಪಸ್ಥಿತರಿದ್ದರು. ದೀಪಾ ಪ್ರಾರ್ಥನೆ ಹಾಡಿದರು. ಎಸ್.ಡಿ. ನಾಗರಾಜ ಕಾರ್ಯಕ್ರಮ ನಿರೂಪಿಸಿದರು.