ಮೂವರು ಪುಕ್ಕಲು ಸಚಿವರು ರಾಜೀನಾಮೆ ನೀಡಲಿ: ಮೂಡ್ನಾಕೂಡು ಪ್ರಕಾಶ್‌

| Published : Mar 04 2024, 01:17 AM IST

ಮೂವರು ಪುಕ್ಕಲು ಸಚಿವರು ರಾಜೀನಾಮೆ ನೀಡಲಿ: ಮೂಡ್ನಾಕೂಡು ಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ದಲಿತ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಪ್ರಿಯಾಂಕ್‌ ಖರ್ಗೆ ಅವರು ದಲಿತರ ಹಿತ ಕಾಯುವ ಸಚಿವರಲ್ಲ ಅವರು ಸಿಎಂ ಸಿದ್ದರಾಮಯ್ಯ ಅವರ ಹಿತ ಕಾಯುವ ಸಚಿವರು ಪುಕ್ಕಲು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂಡ್ನಾಕೂಡು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರದ ದಲಿತ ಸಚಿವರಾದ ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಪ್ರಿಯಾಂಕ್‌ ಖರ್ಗೆ ಅವರು ದಲಿತರ ಹಿತ ಕಾಯುವ ಸಚಿವರಲ್ಲ ಅವರು ಸಿಎಂ ಸಿದ್ದರಾಮಯ್ಯ ಅವರ ಹಿತ ಕಾಯುವ ಸಚಿವರು ಪುಕ್ಕಲು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂಡ್ನಾಕೂಡು ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ.ಶಿವರಾಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸದೇ ರಾಜ್ಯ ಸರ್ಕಾರ ದಲಿತರಿಗೆ ಅಪಮಾನ ಮಾಡಿದೆ. ರಾಜ್ಯ ಸರ್ಕಾರದಲ್ಲಿರುವ ಮೂರು ಮಂದಿ ದಲಿತ ಸಚಿವರು ದಲಿತ ಸಮುದಾಯದ ನಿವೃತ್ತ ಅಧಿಕಾರಿ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಸರ್ಕಾರಿ ನೌಕರರಲ್ಲದ ಗೌರಿಲಂಕೇಶ್ ಅವರ ಅಂತ್ಯಕ್ರಿಯೆ, ಅದೇ ರೀತಿ ನಾಲ್ವರು ಚಿತ್ರನಟರ ಅಂತ್ಯಕ್ರಿಯೆಯನ್ನು ಸರ್ಕಾರದ ಗೌರವದೊಂದಿಗೆ ನೆರವೇರಿಸಲಾಗಿದೆ. ಆದರೇ ಐಎಎಸ್‌ ಅಧಿಕಾರಿಯಾಗಿ ನಿವೃತ್ತಿಯಾಗಿದ್ದ ಕೆ.ಶಿವರಾಂ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರ ಗೌರವದೊಂದಿಗೆ ಏಕೆ ನಡೆಸಲಿಲ್ಲ, ಸೌಜನ್ಯಕ್ಕಾದರೂ ಭೇಟಿ ನೀಡಬೇಕಿತ್ತು ಹಾಗೇ ಮಾಡದೇ ಅವಮಾನಿಸಿದ್ದಾರೆ ಎಂದರು.ಕೆ.ಶಿವರಾಂ ದಲಿತ ಮುಖ್ಯಮಂತ್ರಿ ಕೂಗು ಹುಟ್ಟುಹಾಕದಿದ್ದರೆ ಸಚಿವರಾಗಿರುವ ಈ ಮೂವರು ಮೂಲೆಗುಂಪಾಗುತ್ತಿದ್ದರು. ಕೆ.ಶಿವರಾಂ ಹೋರಾಟದ ಪ್ರತಿಫಲದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಛಲವಾದಿ ಮಹಾಸಭಾಕ್ಕೆ ಜಾಗ ಕೊಟ್ಟಿದ್ದರು. ಛಲವಾದಿ ಭವನಕ್ಕೆ ಅನುದಾನ ನೀಡಿದ್ದರು. ನಿಮ್ಮದೇನು ಪಾತ್ರ? ಸಮುದಾಯದ ದಕ್ಷ, ಪ್ರಾಮಾಣಿಕ ಅಧಿಕಾರಿಯ ಋಣತೀರಿಸಕ್ಕಾದರೂ ಅವರ ಅಂತ್ಯಸಂಸ್ಕಾರ ಸರ್ಕಾರ ಗೌರವದೊಂದಿಗೆ ಮಾಡಿದರೆ ನಿಮ್ಮ ಘನತೆ, ಗೌರವ ಹೆಚ್ಚಾಗುತ್ತಿತ್ತು ಎಂದರು. ಸಿದ್ದರಾಮಯ್ಯ ಅವರು ಸಂವಿಧಾನ, ದಲಿತ ವಿಚಾರವನ್ನು ಮುಂದಿಟ್ಟುಕೊಂಡು ಎಲ್ಲರಿಗೂ ಮಂಕುಬೂಧಿ ಎರಚುತ್ತಿದ್ದಾರೆ. ಮರುಳು ಮಾಡುತ್ತಿದ್ದಾರೆ. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಬಳಸಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುವುದು ಒಂದು ಮಾಡುವುದು ಇನ್ನೊಂದು ಅವರು ದಲಿತರಪಾಲಿಗೆ ಗೋಮುಖ ವ್ಯಾಘ್ರರಾಗಿದ್ದಾರೆ ಎಂದರು.

ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ. ಇದರಿಂದ ನಿಗಮಗಳಲ್ಲಿ ಸಾಲಸೌಲಭ್ಯಗಳು ಕಡಿಮೆಯಾಗಿದೆ. ಭೂ ಒಡೆತನ ಯೋಜನೆಗೆ ಒಂದು ರೂಪಾಯಿ ಇಲ್ಲ. ಜಮೀನು ತೆಗೆದುಕೊಡಲು ಅನುದಾನ ಇಲ್ಲ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಲು ಹಣ ಇಲ್ಲ. ಐರಾವತ ಯೋಜನೆಗಳಿಗೆ ಹಣ ಇಲ್ಲ. ಒಂದು, ಎರಡು ಫಲಾನುಭವಿಗೆ ಸಾಲಸೌಲಭ್ಯ ಸಿಗುತ್ತಿದೆ. ಸಿದ್ದರಾಮಯ್ಯ ತಮ್ಮ ಸಮುದಾಯದ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿಕೊಳ್ಳುವ ಸಲುವಾಗಿ ದಲಿತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ದೂರಿದರು.ಕೆ.ಶಿವರಾಂ ಹಾಗೂ ದಲಿತ ಸಮುದಾದವರ ಮೇಲೆ ಗೌರವ ಇದ್ದರೆ ರಾಜ್ಯದಲ್ಲಿ ಕನ್ನಡ ನಾಡು, ನುಡಿಗೆ ಹೋರಾಟದ ಮಾಡಿದವರಿಗೆ ಕೆ.ಶಿವರಾಂ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಗೌರವ ಉಳಿಸಿಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿಮೂರ್ತಿ, ಮಾಧ್ಯಮ್ ಸಹಪ್ರಮುಖ್ ಅಶ್ವಿನ್, ಮುಖಂಡ ಭಾನುಪ್ರಕಾಶ್ ಹಾಜರಿದ್ದರು.