ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಮಾನವ ಮಾನವನನ್ನು ಗೌರವಿಸುವುದೇ ಮಾನವ ಹಕ್ಕು. ನಾನು ಮಾತಾಡಿದರೆ ಇನ್ನೊಬ್ಬರಿಗೆ ನೋವಾಗದಂತಿರಬೇಕು ಎಂಬುದನ್ನು ವಚನಕಾರರು ಹೇಳುವ ಮೂಲಕ ಮಾನವ ಹಕ್ಕುಗಳನ್ನು ವಿಭನ್ನ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಬಿ. ಅಮರಣ್ಣವರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ದಿ. ಪ್ರೊ. ರಾಮಚಂದ್ರ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ''''ವಚನಗಳು ಮತ್ತು ಮಾನವ ಹಕ್ಕುಗಳು'''' ವಿಷಯದ ಕುರಿತು ಉಪನ್ಯಾಸ ನೀಡಿದರು.
ವಚನ ಪಾಲಿಸಿದರೆ ಸಂವಿಧಾನ ಪಾಲಿಸಿದಂತೆ. ಸಂವಿಧಾನ ಪಾಲಿಸಿದರೆ ವಚನ ಅನುಕರಣೆ ಮಾಡಿದಂತೆ. ಶರಣರು ಅಸ್ಪೃಶ್ಯತೆ, ಲಿಂಗ ಸಮಾನತೆ ಬಗ್ಗೆ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಬಹುತೇಕ ವಚನಕಾರರ ಆಶಯಗಳೆಲ್ಲ ಸಂವಿಧಾನದಲ್ಲಿ ಅಡಕವಾಗಿವೆ. ಹಿಂಸೆ ಎಂದರೆ ಕೇವಲ ದೈಹಿಕವಾಗಿ ಅಲ್ಲ. ಮಾನಸಿಕವಾಗಿಯೂ ಘಾಸಿ ಮಾಡುವುದು ಕೂಡ ಹಿಂಸೆಯಾಗುತ್ತದೆ. ನಮ್ಮ ನಡೆ ನುಡಿ ಸ್ಪಟಿಕದ ಸಲಾಕೆಯಂತಿರಬೇಕು ಎನ್ನುವ ಮೂಲಕ ಇನ್ನೊಬ್ಬರ ಮಾನ ನಷ್ಟವಾಗದಂತೆ ನಡೆದುಕೊಳ್ಳಬೇಕು ಎಂದು ಬಸವಣ್ಣನವರು ಹೇಳಿದ್ದಾರೆ.ವಚನಕಾರರು ಕೇವಲ ವಚನ ಬರೆಯಲಿಲ್ಲ. ಬರೆದಂತೆ ಬದುಕಿ ತೋರಿಸಿದರು. ಬದುಕಿದಂತೆ ಬರೆದರು. ಜಗತ್ತಿಗೆ ಮಾನವೀತೆಯ ಶ್ರೇಷ್ಠತೆಯ ದಾರಿ ತೋರಿಸಿದರು ಎಂದರು.
ಸಾವಿರಾರು ಕಾನೂನುಗಳು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಬಂದಿವೆ. ಅವೆಲ್ಲವೂ ವಚನಗಳಲ್ಲಿ ಅಡಕವಾದ ಅಂಶಗಳನ್ನೇ ಒಳಗೊಂಡಿವೆ. ಭಾರತೀಯ ದಂಡ ಸಂಹಿತೆಯಲ್ಲಿ ಸೂಚಿಸುವ ಅಂಶಗಳನ್ನು ಬಸವಣ್ಣನವರ ಕಳಬೇಡ, ಕೊಲಬೇಡ ವಚನದಲ್ಲಿ ಸಪ್ತ ಸೂತ್ರ ನೀಡುವುದರೊಂದಿಗೆ ಸ್ಪಷ್ಟವಾಗಿ ಅಪರಾಧ ತಡೆಗಟ್ಟುವ ಮಾರ್ಗವನ್ನು ಹೇಳಿಕೊಟ್ಟಿದ್ದಾರೆ ಎಂದರು.ಮಾನವ ಹಕ್ಕುಗಳನ್ನು ಜಾರಿಗೊಳಿಸಿರುವುದರಿಂದ ದೇಶದಲ್ಲಿ ಜೀವನ ಮಟ್ಟ ಸುಧಾರಿಸಿದೆ. ಇದಕ್ಕೆಕಾರಣ ವಚನಗಳ ಪ್ರಭಾವವೂ ಆಗಿದೆ ಎಂದ ಅವರು, ಇಂದು ಜಗತ್ತಿನಲ್ಲಿ ಭಯೋತ್ಪಾದನೆ, ಅನಾಚಾರ, ಭ್ರಷ್ಟಾಚಾರ ಮಿತಿ ಮೀರಿದೆ. ಇವುಗಳು ನಿಯಂತ್ರಣಕ್ಕೆ ಬರಬೇಕೆಂದರೆ ವಚನ ಪಾಲಿಸಿದರೆ ಸಾಕು ಎಂದರು.
ಸಕಲ ಜೀವಾತ್ಮಕ್ಕೆ ಲೇಸನ್ನು ವಚನಕಾರರು ಬಯಸಿದರು. ನಮ್ಮ ಸಂವಿಧಾನವೂ ಇದನ್ನೇ ಪ್ರತಿಪಾದಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಬರೀ ಕಾನೂನಿನಿಂದ ಸಾಧ್ಯವಿಲ್ಲ. ಸಮಾಜದಲ್ಲಿ ನೈತಿಕತೆ ಮಟ್ಟ ಹೆಚ್ಚಾದಾಗ ಮಾತ್ರ ಮಹಿಳೆಯರ ದೌರ್ಜನ್ಯ ನಿಲ್ಲಿಸಲು ಸಾಧ್ಯವಾಗುವುದು ಎಂದರು.ಹೈಕೋರ್ಟ್ ಧಾರವಾಡ ಪೀಠದ ವಿಶ್ರಾಂತ ಹೆಚ್ಚುವರಿ ಸಹಾಯಕ ಸಾಲಿಸಿಟರ್ ಜನರಲ್ ಕೆ.ಬಿ. ನಾವಲಗಿಮಠ ಅಧ್ಯಕ್ಷತೆ ವಹಿಸಿದ್ದರು.
ರಾಂಚಿ ಕಾನೂನಿನ ಅಧ್ಯಯನ ಮತ್ತು ಸಂಶೋಧನಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಪಾಟೀಲ, ಶಾರದಾ ಪಾಟೀಲ ದತ್ತಿ ದಾನಿಗಳ ಪರವಾಗಿ ಮಾತನಾಡಿದರು. ಮಧುಮತಿ ಸಣಕಲ್ಲ ಪ್ರಾರ್ಥಿಸಿದರು. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ, ಪ್ರಮಿಳಾ ಜಕ್ಕಣ್ಣವರ, ಸದಾನಂದ ಮುಂದಿನಮನಿ, ರಾಜು ನಾವಲಗಿಮಠ, ಮಹಾಂತೇಶ ನರೇಗಲ್ಲ, ಶಿವಾನಂದ ಹೂಗಾರ, ನಿಂಗಣ್ಣಕುಂಟಿ, ಮುದಿಗೌಡರ ಹಾಗೂ ರಾಮಚಂದ್ರ ಪಾಟೀಲ ಪರಿವಾರ ಭಾಗವಹಿಸಿದ್ದರು.