ಸಾರಾಂಶ
ದೇಶದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ಇದಕ್ಕೆ ಕಾರಣವಾದವರಲ್ಲಿ ಡಿ.ಆರ್.ಪಾಟೀಲರು ಪ್ರಮುಖರು ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಿಂದಾಗಿ ಗಾಂಧೀಜಿಯವರ ಕನಸಿನ ವಿಕೇಂದ್ರೀಕರಣ ವ್ಯವಸ್ಥೆ ಮುಂದಿನ ಕಾಲು ಶತಮಾನದಲ್ಲಿ ಸಾಕಾರವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದರು.ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ್ ಅವರಿಗೆ ‘ಶ್ರೀಮತಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ಪ್ರದಾನ’ ಮಾಡಿ ಮಾತನಾಡಿದರು.
ದೇಶದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ಇದಕ್ಕೆ ಕಾರಣವಾದವರಲ್ಲಿ ಡಿ.ಆರ್.ಪಾಟೀಲರು ಪ್ರಮುಖರು. ಕರ್ನಾಟಕದಲ್ಲಿ ‘ರಮೇಶ್ ಕುಮಾರ್ ಸಮಿತಿ’ ಪಂಚಾಯತ್ ರಾಜ್ ವ್ಯವಸ್ಥೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ನೇಮಕವಾಗಿತ್ತು. ಇದಕ್ಕೆ ನಾನು ಅನುಭವದ ಹಿನ್ನೆಲೆಯಲ್ಲಿ 38 ಸಲಹೆ ಕೊಟ್ಟಿದ್ದೆ. ಎಲ್ಲವೂ ಅಂಗೀಕಾರವಾಗಲು ಡಿ.ಆರ್.ಪಾಟೀಲರು ಕಾರಣ ಎಂದು ಶ್ಲಾಘಿಸಿದರು.ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅವರಿಗಿರುವ ಬದ್ಧತೆ ಪ್ರಶ್ನಾತೀತವಾದದ್ದು. ಇಂತಹವರ ಅರ್ಪಣಾ ಭಾವದಿಂದಲೇ ಮುಂದಿನ 25 ವರ್ಷದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದು ಗಾಂಧೀಜಿಯವರ ಕನಸಿನ ವಿಕೇಂದ್ರೀಕರಣ ಸಾಧ್ಯವಾಗಲಿದೆ ಎಂದರು.
ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಡಿ.ಆರ್.ಪಾಟೀಲರು ಬಸವಣ್ಣನ ವಚನಗಳನ್ನು ಕೇವಲ ಮಾತಿಗೆ ಉಳಿಸದೆ ಜೀವನದಲ್ಲಿ ಅಳವಡಿಸಿಕೊಂಡವರು. ಕಡ್ಡಾಯ ಮತದಾನ ಜಾರಿಯಾದ ದಿನ ಪ್ರಜಾಪ್ರಭುತ್ವ ನಿಜಕ್ಕೂ ಜಾರಿಯಾಗುತ್ತದೆ ಎನ್ನುವುದನ್ನು ಅವರು ಅರಿತಿದ್ದರು. ಹೀಗಾಗಿಯೇ ವಿಕೇಂದ್ರೀಕರಣಕ್ಕೆ ಪ್ರಯತ್ನಿಸಿದರು. ರಚನಾತ್ಮಕ ಕಾರ್ಯಗಳಲ್ಲಿ ಸದಾ ಮಾರ್ಗದರ್ಶಕರಾಗಿರುವ ಅವರನ್ನು ಸಿದ್ದೇಶ್ವರ ಸ್ವಾಮಿಗಳೇ ‘ಸಂತ ರಾಜಕಾರಣಿ’ ಎಂದು ಕರೆದಿದ್ದರು ಎಂದು ಹೇಳಿದರು.ಮಾಜಿ ಸಂಸದ ಮತ್ತು ಐದನೆಯ ಹಣಕಾಸು ಅಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ಡಾ। ಮಹೇಶ ಜೋಶಿ ಮಾತನಾಡಿದರು.
ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಗದಗ-ವಿಜಯಪುರ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಡಾ। ಚಿಕ್ಕಕೊಮಾರಿಗೌಡ ಇದ್ದರು.