ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಮೂಲಕ ಬಹಳ ದೊಡ್ಡ ಪ್ರಮಾಣದ ಆರ್ಥಿಕ ನೆರವು ನೇರವಾಗಿ ಜನರ ಖಾತೆಗೆ ಸಂದಾಯವಾಗುತ್ತಿರುವ ದೇಶದ ಏಕೈಕ ರಾಜ್ಯ ನಮ್ಮದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಡೊಳ್ಳೇಶ್ವರ ಕ್ರಾಸ್‌ನಲ್ಲಿನ ತುಳಜಾಭವಾನಿ ದೇವಸ್ಥಾನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ₹೭೫ ಲಕ್ಷ ವೆಚ್ಚದಲ್ಲಿ ನೂತನ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಮುಖ ನಾಲ್ಕು ಗ್ಯಾರಂಟಿ ಯೋಜನೆಗಳಿಂದ ಈ ವರ್ಷ ರಾಜ್ಯದ ಜನರ ಖಾತೆಗೆ ₹೩೯ ಸಾವಿರ ಕೋಟಿ ಆರ್ಥಿಕ ನೆರವು ಸಿಗುತ್ತಿದ್ದು, ಬರುವ ಆರ್ಥಿಕ ವರ್ಷದಿಂದ ಯುವನಿಧಿಯೂ ಸೇರಿದಂತೆ ಎಲ್ಲ ಐದು ಗ್ಯಾರಂಟಿ ಯೋಜನೆಗಳಿಂದ ಬರೋಬ್ಬರಿ ₹೫೮ ಸಾವಿರ ಕೋಟಿಗೂ ಅಧಿಕ ಆರ್ಥಿಕ ನೆರವು ಸಿಗಲಿದೆ. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವನ್ನು ದೇಶದ ಯಾವುದೇ ರಾಜ್ಯಗಳೂ ಸಹ ಜನರ ಖಾತೆಗಳಿಗೆ ನೇರವಾಗಿ ನೀಡುತ್ತಿಲ್ಲ. ಇದು ಇತಿಹಾಸ. ಚುನಾವಣೆ ಸಮಯದಲ್ಲಿ ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಂಡು ನುಡಿದಂತೆ ನಡೆದಿದೆ, ನಡೆಯುತ್ತಿದೆ ಎಂದ ಶಾಸಕ ಮಾನೆ, ಈ ವರ್ಷದ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣಕಾಸಿನ ನೆರವು ಸಿಗಲಿದ್ದು, ಮುಂದಿನ ವರ್ಷ ಅಭಿವೃದ್ಧಿ ಕಾರ್ಯಗಳು ಜನರ ಕಣ್ಣಿಗೆ ಕಾಣುವಂತಾಗಲಿವೆ. ತಾಲೂಕಿನಲ್ಲಿ ಹತ್ತು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದು, ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸಲು ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕುರುಬರ, ಸದಸ್ಯರಾದ ಜಾಫರ್ ಶಾಡಗುಪ್ಪಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ನ್ಯಾಯವಾದಿ ಯಾಸೀರ್ ಅರಾಫತ್ ಮಕಾನದಾರ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಕಲವೀರಣ್ಣನವರ, ಮುಖಂಡರಾದ ಬಾಬಣ್ಣ ಆರೇರ, ದ್ಯಾಮಜ್ಜ ಕಲವೀರಣ್ಣನವರ, ಮುಜಿಬುಲ್ಲಾ ಬಿಜಾಪೂರ, ಮಂಜುನಾಥ ಕುದರಿ, ನಾಗರಾಜ ಆರೇರ, ಶಿವು ತಳವಾರ, ಮಕ್ಬೂಲ್ ಆಡೂರ, ಪ್ರಭಾಕರ ಬಾಬಜಿ, ಶಿವಕುಮಾರ ದೇಶಮುಖ ಈ ಸಂದರ್ಭದಲ್ಲಿದ್ದರು.