ಹೊರ ಗುತ್ತಿಗೆ ನೌಕರರ ನೇರ ಪಾವತಿಗೊಳಪಡಿಸಿ: ಎಂ.ಆರ್.ದುಗ್ಗೇಶ

| Published : Feb 14 2024, 02:17 AM IST

ಸಾರಾಂಶ

ಯುಜಿಡಿ ಕಾರ್ಮಿಕರು ಸೇರಿ ಎಲ್ಲ ನೌಕರರ ನೇರ ಪಾವತಿಗೊಳಪಡಿಸಬೇಕು. ಈ ವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿಲ್ಲ. ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಯಡಿ ತಂದರೆ ಸರ್ಕಾರಕ್ಕೆ ಜಿಎಸ್ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ಸಿಗಲಿದೆ. ಅಲ್ಲದೇ, ಏಜೆನ್ಸಿಗಳ ಕಿರುಕುಳವೂ ತಪ್ಪಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆಯ ಎಲ್ಲಾ ನೌಕರರನ್ನು ನೇರ ಪಾವತಿಗೆ ತರಲು ಬಜೆಟ್ ನಲ್ಲಿ ಘೋಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಮಂಗಳವಾರದಿಂದ ಎರಡು ದಿನಗಳ ಧರಣಿ ಸತ್ಯಾಗ್ರಹವನ್ನು ನಗರದಲ್ಲಿ ಪಾಲಿಕೆ ಹೊರ ಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ನಡೆಸಿದರು.

ನಗರದ ಪಾಲಿಕೆ ಮುಂಭಾಗದಲ್ಲಿ ಸಂಘದ ಅಧ್ಯಕ್ಷ ಎಂ.ಆರ್.ದುಗ್ಗೇಶ ಇತರರ ನೇತೃತ್ವದಲ್ಲಿ ಎರಡು ದಿನಗಳ ಹೋರಾಟ ಆರಂಭಿಸಿದ ಹೊರ ಗುತ್ತಿಗೆ ನೌಕರರು, ಮಾ.15ರಂದು ಹೊರಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಯವರ ಮನೆ ಕಡೆಗೆ ಆಂದೋಲನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ.

ಧರಣಿ ವೇಳೆ ಮಾತನಾಡಿದ ಸಂಘದ ಎಂ.ಆರ್.ದುಗ್ಗೇಶ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರ ಚಾಲಕರು, ನೀರಗಂಟಿಗಳು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಸೇರಿ ಎಲ್ಲ ನೌಕರರ ನೇರ ಪಾವತಿಗೊಳಪಡಿಸಬೇಕು. ಈ ವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿಲ್ಲ. ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಯಡಿ ತಂದರೆ ಸರ್ಕಾರಕ್ಕೆ ಜಿಎಸ್ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ಸಿಗಲಿದೆ. ಅಲ್ಲದೇ, ಏಜೆನ್ಸಿಗಳ ಕಿರುಕುಳವೂ ತಪ್ಪಲಿದೆ ಎಂದರು.

ಹಿಂದಿನ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿಯೇ ಕಾರ್ಮಿಕರ ನೇರ ಪಾವತಿಗೆ ತರಲು ತೀರ್ಮಾನವಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ. ಪೌರಾಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು, ಅಗತ್ಯಕ್ಕನುಗುಣವಾಗಿ ಪೌರ ಚಾಲಕರ ಹುದ್ದೆಗಳ ಸೃಜಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಬಿ.ಸಂತೋಷ್, ಎಚ್.ಎಂ.ಕೊಟ್ರೇಶ, ಜಿ.ಎಚ್.ಚಂದ್ರಪ್ಪ, ಎಂ.ರಮೇಶ, ಮೈಲಾರಪ್ಪ, ಎನ್.ದ್ಯಾಮಣ್ಣ, ನವೀನಕುಮಾರ, ಕೆಟಿಜೆ ನಗರ ರವಿ ಇತರರಿದ್ದರು.

...........

ಹೋರಾಟಕ್ಕೆ ಪಾಲಿಕೆ ವಿಪಕ್ಷ ನಾಯಕ ಬೆಂಬಲ

ವಿಧಾನಸಭೆ, ಪರಿಷತ್ ನಲ್ಲೂ ನೌಕರರ ಪರ ಬಿಜೆಪಿ ಧ್ವನಿ ಎತ್ತುವ ಭರವಸೆ

ದಾವಣಗೆರೆ: ಪಾಲಿಕೆ ಹೊರಗುತ್ತಿಗೆ ನೌಕರರು ಧರಣಿ ನಡೆಸಿದ್ದ ಸ್ಥಳಕ್ಕೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಆರ್.ಶಿವಾನಂದ ಇತರರು ಬೆಂಬಲಿಸಿ, ಹೋರಾಟಕ್ಕೆ ನೈತಿಕ ಸ್ಥೈರ್ಯ ತುಂಬಿದರು.

ಈ ವೇಳೆ ಮಾತನಾಡಿದ ಪ್ರಸನ್ನಕುಮಾರ, ಹೊರ ಗುತ್ತಿಗೆಯ ಎಲ್ಲಾ ಪಾಲಿಕೆ ನೌಕರರನ್ನು ನೇರ ಪಾವತಿಗೆ ತರಲು ಸರ್ಕಾರಕ್ಕೆ ಬೇಡಿಕೆಯನ್ನು ಪಾಲಿಕೆ ಆಯುಕ್ತರು ಕಳಿಸಿಕೊಡಬೇಕು. ಈಗಾಗಲೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹೊರ ಗುತ್ತಿಗೆ ರದ್ದುಪಡಿಸಿ, ನೇರ ಪಾವತಿ, ನೇಮಕಾತಿ ಮಾಡಬೇಕೆಂಬ ವಿಷಯ ತರಲು ಮನವಿ ಮಾಡಿದ್ದೇವೆ. ಸಭೆಯಲ್ಲಿ ತೀರ್ಮಾನಿಸಿ, ಅದನ್ನು ಸರ್ಕಾರಕ್ಕೆ ಕಳಿಸುವಂತೆ ಒತ್ತಾಯಿಸಿದ್ದೇವೆ. ಬಿಜೆಪಿ ಸದಸ್ಯರೆಲ್ಲ ನಿಮ್ಮ ಪರವಾಗಿದ್ದೇವೆ ಎಂದರು.

ವಿಧಾನ ಮಂಡಲ ಅಧಿವೇಶನದಲ್ಲೂ ನಿಮ್ಮ ಬೇಡಿಕೆ ಬಗ್ಗೆ ಪ್ರಸ್ತಾಪಿಸಲು ವಿಪಕ್ಷ ನಾಯಕ ಆರ್.ಅಶೋಕ, ನಮ್ಮೆಲ್ಲಾ ಶಾಸಕರು, ಮೇಲ್ಮನೆ ವಿಪಕ್ಷ ನಾಯಕರು, ಸದಸ್ಯರಿಗೂ ಮನವಿ ಮಾಡುತ್ತೇವೆ. ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಕೋರುತ್ತೇವೆ. ನಿಮ್ಮ ಹೋರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಕಾರ್ಮಿಕರು ಕೆಲಸ ಮಾಡಬೇಕು. ನೀವು ಕೆಲಸ ನಿಲ್ಲಿಸಿ, ಹೋರಾಟಕ್ಕಿಳಿದರೆ ತೀವ್ರ ತೊಂದರೆಯಾಗುತ್ತದೆ. ಆದಷ್ಟು ಬೇಗನೆ ಜಿಲ್ಲಾ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಸರ್ಕಾರದ ಗಮನಕ್ಕೆ ಈ ವಿಚಾರ ತಂದು, ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.