ಜೀವರಾಜ್ ಎಜುಕೇಷನಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ

| Published : Feb 14 2024, 02:17 AM IST

ಸಾರಾಂಶ

ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಂದು ಶಿಕ್ಷಣ ಒದಗಿಸುತ್ತಿರುವ ಜೀವರಾಜ್ ಎಜುಕೇಷನಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಂದು ಶಿಕ್ಷಣ ಒದಗಿಸುತ್ತಿರುವ ಜೀವರಾಜ್ ಎಜುಕೇಷನಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಮಂಗಲ ಹುಲುಸುಗುಡ್ಡದಲ್ಲಿ ಜೀವರಾಜ್ ಎಜುಕೇಷನಲ್ ಟ್ರಸ್ಟ್‌ನ ರಿಪಬ್ಲಿಕ್ ಇಂಟರ್‌ ನ್ಯಾಷನಲ್‌ ರೆಸಿಡೆನ್ಸಿಯಲ್ ಸ್ಕೂಲ್ ಆ್ಯಂಡ್ ಕಾಲೇಜ್ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಶಾಲಾ ವಾರ್ಷಿಕೋತ್ಸವ (ಜೀವೋತ್ಸವ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಶಿಕ್ಷಣ ಅತ್ಯಗತ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ದೇಶ ವಿದೇಶದಲ್ಲಿ ಹೆಸರು ಮಾಡುವಂತಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಇಡಿ ಜಗತ್ತೇ ಮೆಚ್ಚುವ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ. ವೈವಿದ್ಯಮಯ ದೇಶಕ್ಕೆ ಅನುಗುಣವಾಗಿ ಉತ್ತಮ ಸಂವಿಧಾನ ನೀಡಿ ಸಮಾನತೆಯನ್ನು ಕಲ್ಪಿಸಿದ್ದಾರೆ. ಈ ದಿಸೆಯಲ್ಲಿ ರಿಪಬ್ಲಿಕ್ ಇಂಟರ್‌ ನ್ಯಾಷನಲ್‌ ರೆಸಿಡೆನ್ಸಿಯಲ್ ಸ್ಕೂಲ್ ಆ್ಯಂಡ್ ಕಾಲೇಜ್ ಉತ್ತಮ ವೇದಿಕೆಯಾಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು. ಈ ಶಿಕ್ಷಣ ಸಂಸ್ಥೆ ರಾಜ್ಯ ದೇಶದಲ್ಲಿ ಹೆಸರುವಾಸಿಯಾಗಲಿ ಎಂದು ಆಶಿಸಿದರು.ಡಿವೈಎಸ್‌ಪಿ ಮಹಾನಂದ್ ಮಾತನಾಡಿ, ರಿಪಬ್ಲಿಕ್ ಎಂಬ ಕಲ್ಪನೆಯ ಐಡಿಡೆಂಟಿಯನ್ನು ಭಾರತೀಯ ಸಂವಿಧಾನ ನೀಡಿದಂತೆ ಮಂಗಲ ಗ್ರಾಮದ ಐಡಿಡೆಂಟಿಯನ್ನು ಜೀವರಾಜ್ ಎಜುಕೇಷನಲ್ ಟ್ರಸ್ಟ್‌ನ ರಿಪಬ್ಲಿಕ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಆ್ಯಂಡ್ ಕಾಲೇಜ್ ನೀಡಲಿದೆ ಎಂಬ ವಿಶ್ವಾಸವಿದೆ. ಸಂಸ್ಥೆಯ ನಿರ್ದೇಶಕ ರವೀಂದ್ರ ಸಿಂಗಪೂರದಿಂದ ವಾಪಾಸ್ ಬಂದು ತವರು ನೆಲದಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಹುಟ್ಟು ಹಾಕಿರುವುದು ಹೆಮ್ಮೆಯ ವಿಷಯ ಎಂದರು. ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸ್ವಾಮಿ ಪೊನ್ನಾಚಿ ಮಾತನಾಡಿ, ಹಿಂದಿನ ಮತ್ತು ಇಂದಿನ ಶಿಕ್ಷಣಕ್ಕೂ ವ್ಯತ್ಯಾಸವಿದೆ. ಇಂಗ್ಲಿಷ್ ಭಾಷೆ ಅನಿವಾರ್ಯ. ನಾನು ಇತ್ತೀಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ನನ್ನ ಅನಿಸಿಕೆಯನ್ನು ಇಂಗ್ಲಿಷ್ ನಲ್ಲಿ ಹೇಳಲು ತಡವರಿಸಿದ್ದೇನೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಇಂತಹ ಶಿಕ್ಷಣ ಸಂಸ್ಥೆಯ ಅವಶ್ಯಕತೆ ಇದೆ. ಇಂತಹ ಶಿಕ್ಷಣ ಪಡೆಯುತ್ತಿರುವ ಮಕ್ಕಳೇ ಪುಣ್ಯವಂತರು ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನಮೋಹಕ ನೃತ್ಯ ಮತ್ತು ನಾಟಕವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುನ್ಸಿಪಾಲ್ ವಕ್ಫ್ ಸಮಿತಿ ಐಎಎಸ್ ಅಧಿಕಾರಿ ಸಾದಿಕ್ ಪಾಷ, ಬೌದ್ಧ ಬಿಕ್ಕು ಮನೋರಂಖಿತ ಬಂತೇಜೆ, ಪಾಸ್ಟರ್ ವಿನ್ಸೆಂಟ್ ಅಮಲ್ ದಾಸ್, ಕರ್ನಾಟಕ ಹಾಲು ಮಹಾ ಮಂಡಳಿಯ ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ತಾರಿಖ್ ಅಹಮ್ಮದ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಪಂ.ಮಾಜಿ ಉಪಾಧ್ಯಕ್ಷ ಕೊಪ್ಪಾಳಿ ಮಹಾದೇವ ನಾಯಕ, ಮಂಗಲ ಪುಟ್ಟರಾಜು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಮುಖಂಡರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.