ಎಲ್ಲಾ ಪಾಲಿಕೆಗಳಲ್ಲಿ ಜಲಮಂಡಳಿ ಸೇರಿದಂತೆ ಪಾಲಿಕೆ ಅಧಿಕಾರಿಗಳ ತಂಡ ರಚಿಸಬೇಕೆಂದು ಮುಖ್ಯ ಆಯುಕ್ತ ಮಹೇಶ್ವರರಾವ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲ್ಲಾ ಪಾಲಿಕೆಗಳಲ್ಲಿ ಜಲಮಂಡಳಿ ಸೇರಿದಂತೆ ಪಾಲಿಕೆ ಅಧಿಕಾರಿಗಳ ತಂಡ ರಚಿಸಬೇಕೆಂದು ಮುಖ್ಯ ಆಯುಕ್ತ ಮಹೇಶ್ವರರಾವ್ ಸೂಚನೆ ನೀಡಿದರು.ಐದು ನಗರ ಪಾಲಿಕೆಗಳಲ್ಲಿ ನ.1ರಿಂದ ಆರಂಭವಾಗಲಿರುವ ‘ವಾರ್ಡ್ ಒನ್’ ಅಭಿಯಾನದ ಪೂರ್ವಸಿದ್ಧತಾ ಸಭೆ ಗುರುವಾರ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಯಾ ವಿಭಾಗದಲ್ಲಿ ಆಯ್ಕೆಯಾದ ವಾರ್ಡ್ಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಗುರುತಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ ದಿನ ಯಾವ ವಾರ್ಡ್ನಲ್ಲಿ ಯಾವ ಕಾರ್ಯ ಕೈಗೊಳ್ಳಲಾಗುವುದು ಎಂಬುದರ ಕುರಿತು ನಿಖರವಾದ ಕಾರ್ಯಯೋಜನೆ ರೂಪಿಸಿ ಸಲ್ಲಿಸುವಂತೆ ಐದು ನಗರ ಪಾಲಿಕೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಯ್ಕೆಯಾದ ವಾರ್ಡ್ಗಳಲ್ಲಿ ರಸ್ತೆ ಮತ್ತು ಜಂಕ್ಷನ್ಗಳ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವಿಕೆ, ತೀವ್ರ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳ ಕರ್ಬ್ಸ್ಟೋನ್ಗಳು ಹಾಗೂ ಸ್ಲ್ಯಾಬ್ಗಳ ದುರಸ್ತಿ, ಒಳಚರಂಡಿ ಚೇಂಬರ್ಗಳ ಮುಚ್ಚಳಗಳ ದುರಸ್ತಿ, ಬೀದಿ ದೀಪಗಳ ದುರಸ್ತಿ, ಒಣಗಿದ ಮರದ ರೆಂಬೆ-ಕೊಂಬೆಗಳ ತೆರವು ಹಾಗೂ ತ್ಯಾಜ್ಯ ಮತ್ತು ಮಣ್ಣಿನ ರಾಶಿಗಳ ತೆರವು ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. ವಾರ್ಡ್ಗಳಿಗೆ ಸಂಬಂಧಿಸಿದಂತೆ ಜಲಮಂಡಳಿ ಹಾಗೂ ಬೆಸ್ಕಾಂನಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ನಗರ ಪಾಲಿಕೆಗಳ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಿರುವ ಬೀಡಾಡಿ ವಾಹನಗಳನ್ನು ನಿಯಮಾನುಸಾರ ತೆರವುಗೊಳಿಸಬೇಕು. ವಾಹನಗಳಿಗೆ ನೋಟಿಸ್ ಅಂಟಿಸಿ, ಟೋಯಿಂಗ್ ಮಾಡಿದ ಬಳಿಕ ನಿಯಮಾನುಸಾರ ನಿಗದಿತ ಕಾಲಾವಕಾಶ ನೀಡಬೇಕು. ಈ ಅವಧಿಯೊಳಗೆ ಮಾಲೀಕರು ದಂಡ ನೀಡಿ ವಾಹನಗಳನ್ನು ಹಿಂಪಡೆಯದಿದ್ದಲ್ಲಿ, ಅನ್ವಯಿಸುವ ನಿಯಮಗಳ ಪ್ರಕಾರ ವಾಹನಗಳನ್ನು ಹರಾಜು ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಡಾ.ರಾಜೇಂದ್ರ ಕೆ.ವಿ., ಡಿ.ಎಸ್.ರಮೇಶ್ ಹಾಗೂ ಕೆ.ಎನ್. ರಮೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.