ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರುಪ್ರಪಂಚದ ಶ್ರೇಷ್ಠ ನಾಲ್ಕು ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಹಾಗಾಗಿ ರಾಮ ರಾಜ್ಯದ ಪರಿಕಲ್ಪನೆ ಪುರುಷೋತ್ತಮ ಬಾಲಕನಾಗಿರುವಾಗಲೇ ಆರಂಭವಾಗಿರುತ್ತದೆ. ಅದಕ್ಕೆ ಪೂರಕವಾಗಿ ಸಾಕೇತ ಅಯೋಧ್ಯೆ ಎಂಬುದಾಗಿ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ರಾಮಾಯಣವನ್ನು ಓದಿದರೆ ಭಾರತೀಯ ಸಂಸ್ಕೃತಿಯ ಇತಿಹಾಸ ಓದಿದಂತೆ. ಅಷ್ಟೇ ಅಲ್ಲದೆ ಇದರಲ್ಲಿ ಚಾರಿತ್ರಿಕ, ಸಾಂಸ್ಕೃತಿಕ ಹಾಗೂ ಪೌರಾಣಿಕ ಮಹತ್ವವಿದೆ ಎಂದು ಕಾಲೇಜಿನ ಪರಿಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಎಚ್.ಜಿ. ಹೇಳಿದರು.ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಪಂಪಾರಾಮ ಸ್ಮರಣೆಯಲ್ಲಿ ರಾಮರಾಜ್ಯದ ಪರಿಕಲ್ಪನೆ ಎಂಬ ವಿಷಯದ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಪ್ರಭು ಶ್ರೀರಾಮನ ಆದರ್ಶಗಳು ಜನರನ್ನು ನೂರಾರು ರೀತಿಯಲ್ಲಿ ಉತ್ತೇಜಿಸುತ್ತದೆ. ಭಾರತ ಶಾಂತಿಸ್ಥಾಪಕ ದೇಶ. ನಮ್ಮ ಚಿಂತನೆ ಮತ್ತು ಧರ್ಮವನ್ನು ಉಳಿಸಿಕೊಳ್ಳಲು ಇರುವ ಮಣ್ಣು ಭಾರತ. ನಮ್ಮ ನಾಗರೀಕತೆ, ಸಂಸ್ಕೃತಿ, ಧರ್ಮ, ಜೀವನ ಮೌಲ್ಯ, ಪೌರುಷ, ಸಾಹಸ ಹಾಗೂ ಸತ್ಯದ ಗುರುತೇ ಶ್ರೀರಾಮ. ಆತನ ವ್ಯಕ್ತಿತ್ವ ಅಂತಹದ್ದು. ಈ ನಿಟ್ಟಿನಲ್ಲಿ ರಾಮನ ಜೀವನದಲ್ಲಿ ಸೀತಾಮಾತೆಯ ಪಾತ್ರ ಮಹತ್ವವಾದುದು. ಹಾಗಾಗಿ ರಾಮ ಮಡದಿಯನ್ನು ಸಹಧರ್ಮಿಣಿ ಎಂದು ಕರೆಯುತ್ತಾನೆ. ಅಂದರೆ ಧರ್ಮವನ್ನು ಹೇಳಿಕೊಡುವವಳು ಎಂದರ್ಥ. ಅದಕ್ಕಾಗಿಯೇ ಭಾರತದಲ್ಲಿ ಸ್ತ್ರೀಯರಿಗೆ ಶ್ರೇಷ್ಠವಾದ ಸ್ಥಾನಮಾನವಿದೆ ಎಂದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿ, ಇದೊಂದು ಅಪೂರ್ವ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು, ಬಹುಶಃ ಇಲ್ಲಿ ಜನವರಿ ೨೨ರ ವರೆಗೆ ನಡೆಯುತ್ತಿರುವ ಶ್ರೀರಾಮೋತ್ಸವ ಕಾರ್ಯಕ್ರಮ ಒಂದು ಇತಿಹಾಸ ಸೃಷ್ಟಿದೆ ಎಂದರೆ ತಪ್ಪಾಗರಾರದು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಿಂದೆ ಅದೆಷ್ಟೋ ಕರಸೇವಕರ ಬಲಿದಾನವಿದೆ, ಹೋರಾಟದ ಕಥೆಗಳನ್ನು ಆಲಿಸುವಾಗ ರೋಮಾಂಚನವಾಗುತ್ತದೆ ಹಾಗೂ ಇಂದಿನ ಬೆಳವಣಿಗೆಯನ್ನು ಗಮನಿಸುವಾಗ ಹೆಮ್ಮೆಯೂ ಆಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ್ ಸಾಮಂತ್, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿದರು. ಪ್ರಜ್ಞಾ ಕೆ ವಂದಿಸಿದರು. ಕಾವ್ಯ ಶ್ರೀ ನಿರೂಪಿಸಿದರು.