ಕನ್ನಡ ಭಾಷಾ ವಿಜ್ಞಾನಿ ಪ್ರೊ. ಕೆ. ಕೆಂಪೇಗೌಡ ನಿಧನ

| Published : Feb 27 2025, 12:33 AM IST

ಸಾರಾಂಶ

ಈ ಇಳಿ ವಯಸ್ಸಿನಲ್ಲಿಯೂ ಭಾಷಾ ವಿಜ್ಞಾನದ ಬಗ್ಗೆ ಅಧಿಕೃತವಾಗಿ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದರು

ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ಭಾಷಾವಿಜ್ಞಾನ ಕ್ಷೇತ್ರದ ಅಧ್ಯಯನಕ್ಕೆಂದೇ ತಮ್ಮ ಸರ್ವಸ್ವವನ್ನೂ ಮೀಸಲಾಗಿರಿಸಿದ್ದ ಮಹನೀಯರಲ್ಲಿ ಒಬ್ಬರಾಗಿದ್ದ, ಹೊಸ ಪೀಳಿಗೆಯ ಭಾಷಾ ವಿಜ್ಞಾನಿಗಳಿಗೆ ಸ್ಫೂರ್ತಿ ತುಂಬುತ್ತಿದ್ದ ಮೈಸೂರಿನ ಪ್ರೊ. ಕೆ. ಕೆಂಪೇಗೌಡ [86] ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ನಿವೃತ್ತರಾಗಿದ್ದರು, ಯು.ಜಿ.ಸಿ. ಎಮರಿಟಸ್ ಪ್ರಾಧ್ಯಾಪಕರಾಗಿದ್ದರು.ಈ ಇಳಿ ವಯಸ್ಸಿನಲ್ಲಿಯೂ ಭಾಷಾ ವಿಜ್ಞಾನದ ಬಗ್ಗೆ ಅಧಿಕೃತವಾಗಿ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದರು. 100ಕ್ಕೂ ಹೆಚ್ಚು ಭಾಷಾವಿಜ್ಞಾನದ ಕೃತಿಗಳನ್ನು ರಚಿಸಿದ್ದರು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬ್ಯಾಡರಹಳ್ಳಿಯಲ್ಲಿ 1939 ಆ.15 ರಂದು ಜನಿಸಿದ ಕೆಂಪೇಗೌಡರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಪಕ್ಕದ ಶೆಟ್ಟಿಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಚನ್ನಪಟ್ಟಣದಲ್ಲಿ, ಕಾಲೇಜು ಶಿಕ್ಷಣವನ್ನು ಮೈಸೂರಿನ ಯುವರಾಜ ಮತ್ತು ಮಹಾರಾಜ ಕಾಲೇಜುಗಳಲ್ಲಿ ಪಡೆದು, ಪುಣೆ ವಿಶ್ವವಿದ್ಯಾಲಯಕ್ಕೆ ಸೇರಿದ ಡೆಕ್ಕನ್‌ ಕಾಲೇಜಿನಿಂದ ಭಾಷಾವಿಜ್ಞಾನದಲ್ಲಿ ಎಂ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಎಂ.ಎ., ಭಾಷಾವಿಜ್ಞಾನ ಡಾಕ್ಟರೇಟ್ ಪದವಿ ಹಾಗೂ ಡಿ.ಲಿಟ್. ಗಳಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ, ಮಹಾರಾಜ ಕಾಲೇಜಿನಲ್ಲಿ ಭಾಷಾ ವಿಜ್ಞಾನದ ಹಂಗಾಮಿ ಅಧ್ಯಾಪಕರಾಗಿ ಸೇವೆಸಲ್ಲಿಸಿ, 1970 ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ನಿವೃತ್ತಿಯ ನಂತರ ಯು.ಜಿ.ಸಿ. ಎಮರಿಟಸ್ ಫೆಲೋ ಆಗಿ ಸೇವೆ ಸಲ್ಲಿಸಿದ್ದರು. ಪ್ರೊ. ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಇರುಳರ ಭಾಷೆ ಕುರಿತ ಇವರ ಸಂಶೋಧನಾ ಅಧ್ಯಯನ ಭಾಷಾವಿಜ್ಞಾನ ಕ್ಷೇತ್ರಕ್ಕೆ ಅಪರೂಪದ ಕೊಡುಗೆಯಾಗಿದೆ. ಪ್ರಾಾಧ್ಯಾಪಕರಾಗಿ ಹತ್ತಾರು ಸಂಶೋಧನಾರ್ಥಿಗಳಿಗೆ ಇವರು ಮಾರ್ಗದರ್ಶಕರಾಗಿದ್ದರು. ನಿರಂತರ ಸಂಶೋಧನೆ, ಮಾರ್ಗದರ್ಶನ, ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಕೃತಿರಚನೆ, ಉಪನ್ಯಾಸಗಳಲ್ಲಿ ತೊಡಗಿರುತ್ತಿದ್ದ ಕೆಂಪೇಗೌಡರು ಈಗಲೂ ಕೃತಿಗಳ ರಚನೆ, ಪರಿಷ್ಕಾರ, ಪ್ರಕಟಣೆಗಳಲ್ಲಿ ಸಕ್ರಿಯರಾಗಿದ್ದರು.ಮೈಸೂರು ವಿಶ್ವವಿದ್ಯಾಾಲಯದ ಸೆನೆಟ್ ಮತ್ತು ಸಿಂಡಿಕೇಟ್‌ಗಳ ಸದಸ್ಯರಾಗಿ, ಭಾಷಾ ವಿಜ್ಞಾನ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕೇರಳ ವಿಶ್ವವಿದ್ಯಾಲಯ, ಮದ್ರಾಸ್ ವಿಶ್ವವಿದ್ಯಾಲಯ, ಅಣ್ಣಾಾಮಲೈ ವಿಶ್ವವಿದ್ಯಾಲಯಗಳ ಭಾಷಾವಿಜ್ಞಾನದ ಸಂಶೋನಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಹತ್ತಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಾವಿಜ್ಞಾನ ಸಮಾವೇಶಗಳಲ್ಲಿ, ಸೆಮಿನಾರ್‌ಗಳಲ್ಲಿ, ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರಬಂಧಗಳನ್ನು ಮಂಡಿಸಿದ್ದರು. ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ವಿವಿಧ ಜರ್ನಲ್‌ಗಳಲ್ಲಿ ನೂರಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದರು. ಕನ್ನಡ ವಿಶ್ವಕೋಶಕ್ಕಾಗಿ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚು ಲೇಖನಗಳನ್ನು ರಚಿಸಿದ್ದರು. ಕೃತಕ ಭಾಷೆಗಳ ಕುರಿತಂತೆ 1973 ರಲ್ಲಿಯೇ ಲೇಖನವೊಂದನ್ನು ಪ್ರಕಟಿಸಿದ್ದರು. ಆಕಾಶವಾಣಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಾವಿಜ್ಞಾನದ ಸವಿಯನ್ನು ಕೇಳುಗರಿಗೆ ಉಣಬಡಿಸಿದ್ದರು.ಧ್ವನಿ ವಿಜ್ಞಾನ ಮತ್ತು ಧ್ವನಿಮಾ ವಿಜ್ಞಾನ, ಭಾಷಾವಿಜ್ಞಾನ ಶಬ್ದಕೋಶ, ಸಾಮಾನ್ಯ ಭಾಷಾವಿಜ್ಞಾನ, ತೌಲನಿಕ ದ್ರಾವಿಡ ಭಾಷಾವಿಜ್ಞಾನ, ಕನ್ನಡ ಭಾಷೆಯ ಸ್ವರೂಪ, ಕನ್ನಡ ಉಪಭಾಷೆಗಳ ಅಧ್ಯಯನ, ಕನ್ನಡ ಭಾಷಾಚರಿತ್ರೆ, ತೌಲನಿಕ ದ್ರಾವಿಡ ಧ್ವನಿಮಾಗಳು, ತೌಲನಿಕ ದ್ರಾಾವಿಡ ವ್ಯಾಕರಣ, ಆಕೃತಿಮಾ ವಿಜ್ಞಾನ ಮತ್ತು ವಾಕ್ಯವಿಜ್ಞಾನ, ವಿವರಣಾತ್ಮಕ ಭಾಷಾವಿಜ್ಞಾನ, ಐತಿಹಾಸಿಕ ಮತ್ತು ತೌಲನಿಕ ಭಾಷಾವಿಜ್ಞಾನ, ಅರ್ಥವಿಜ್ಞಾನ, ಭಾಷೆ-ಸಮಾಜ-ಸಂಸ್ಕೃತಿ, ಉಪಭಾಷಾವಿಜ್ಞಾನ, ಭಾಷೆ ಎಂದರೇನು?, ಭಾಷಾಬೋಧನೆ, ಭಾರತೀಯ ಭಾಷೆ ಮತ್ತು ಸಾಹಿತ್ಯ, ಕ್ಷೇತ್ರಕಾರ್ಯ, ಸಾಮಾಜಿಕ ಭಾಷಾವಿಜ್ಞಾನದ ರೂಪುರೇಷೆಗಳು, ಕನ್ನಡ ಭಾಷೆಯಚರಿತ್ರೆ, ದ್ರಾವಿಡ ಭಾಷೆಗಳು, ಭಾಷಾವಿಜ್ಞಾನ ವಿಶ್ವಕೋಶ, ದ್ರಾವಿಡ ಭಾಷಾವಿಜ್ಞಾನ, ವಾಕ್ಯವಿಜ್ಞಾನ, ಕನ್ನಡ ಭಾಷೆ, ಕನ್ನಡ ಪ್ರೌಢವ್ಯಾಕರಣ, ಭಾಷಿಕ ಪರಿವರ್ತನ, ಜಗತ್ತಿನ ಭಾಷೆಗಳ ವರ್ಗೀಕರಣ, ಸಾಮಾಜಿಕ ಭಾಷಾವಿಜ್ಞಾನದ ರೂಪುರೇಷೆಗಳು, ಭಾಷಾವಿಜ್ಞಾನ ಕೋಶ (ಭಾಗ 1, 2), ಕನ್ನಡ ಭಾಷಾವಿಜ್ಞಾನ ಮತ್ತು ವ್ಯಾಕರಣ ವಿಶ್ವಕೋಶ (ಭಾಗ 1, 2, 3), ಕನ್ನಡ ತೌಲನಿಕ ವ್ಯಾಕರಣ, ಕನ್ನಡ ಐತಿಹಾಸಿಕ ವ್ಯಾಕರಣ ಇತ್ಯಾದಿ 80ಕ್ಕೂ ಹೆಚ್ಚು ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಕೆಂಪೇಗೌಡರು ರಚಿಸಿದ್ದಾರೆ. ಜೊತೆಗೆ ಯು.ಜಿ.ಸಿ. ಪ್ರಾಯೋಜಿತ ಯೋಜನೆ ದ್ರಾವಿಡ ಭಾಷಾ ಪದಕೋಶಗಳ ರಚನೆಯಲ್ಲಿ, ಮುಖ್ಯವಾಗಿ ಕನ್ನಡ-ಮಲಯಾಳಂ, ಕನ್ನಡ-ತೆಲುಗು, ಕನ್ನಡ-ತಮಿಳು ಪದಕೋಶಗಳ ಸಂಪಾದನಾ ಕಾರ್ಯದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.ಸಾಮಾನ್ಯ ಭಾಷಾವಿಜ್ಞಾನ ಎಂಬ ಬೃಹತ್‌ ಗ್ರಂಥ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಒದಗಿಸುತ್ತದೆ. ಇದು ಭಾಷಾ ವಿಜ್ಞಾನದ ವಿದ್ಯಾರ್ಥಿಗಳಿಗೆ ಅಗತ್ಯ ಆಕರ ಗ್ರಂಥವಾಗಿದ್ದು. ಕನ್ನಡ ಭಾಷೆಯಲ್ಲಿ ಸರಳವಾಗಿ ಕನ್ನಡದ ಉದಾಹರಣೆಗಳ ಮೂಲಕವೇ ವಿವರಿಸಿರುವುದು ಇದರ ವೈಶಿಷ್ಟ್ಯ.ರಾಮನಗರ ಜಿಲ್ಲೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2021 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಭಾರತೀಯ ಭಾಷಾರತ್ನ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘದಿಂದ 2013 ರಲ್ಲಿ ಹಾ.ಮಾ.ನಾ. ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು.ಬಾಕ್ಸ್‌....ಕನ್ನಡ ಭಾಷೆ ಮತ್ತು ಸಾಹಿತ್ಯದ ಅಬ್ಬರದ ಪ್ರಚಾರದ ನಡುವೆಯೂ ಕನ್ನಡ ಭಾಷಾವಿಜ್ಞಾನಕ್ಕೆ, ಭಾಷೆ ಮತ್ತು ವ್ಯಾಕರಣ ಶಾಸ್ತ್ರಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ. ಕೆ. ಕೆಂಪೇಗೌಡರನ್ನು ನೆನಪು ಮಾಡಿಕೊಳ್ಳುವುದು ಜ್ಞಾನ-ವಿಜ್ಞಾನಕ್ಷೇತ್ರಕ್ಕೆ ಸಲ್ಲಿಸುವ ಹಿರಿದಾದ ಗೌರವವಾಗಿದೆ. ನೂರಾರು ಭಾಷಾ ವಿಜ್ಞಾನ ಪದವೀಧರರನ್ನು ಪ್ರೋತ್ಸಾಹಿಸಿದಂತೆ ತಮ್ಮ ಮಗಳನ್ನೂ ಪ್ರೋತ್ಸಾಹಿಸಿ, ಭಾಷಾವಿಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಮಾಡಿದ ಕೆಂಪೇಗೌಡರ ಮಹತ್ವಾಕಾಂಕ್ಷೆಯ ಭಾಷಾ ಸಂಶೋಧನಾ ಕನಸುಗಳನ್ನು, ಯೋಜನೆಗಳನ್ನು ಮಹಾರಾಜ ಕಾಲೇಜಿನಲ್ಲಿ ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಡಾ. ಬಿ.ಕೆ. ಸುವರ್ಣಾದೇವಿ ಅವರು ಮುಂದುವರಿಸಿರುವುದು ಭಾಷಾ ವಿಜ್ಞಾನಕ್ಷೇತ್ರಕ್ಕೆ ಒಂದುಅಪರೂಪದ ಕೊಡುಗೆಯಾಗಲಿದೆ ಎಂಬುದರಲ್ಲಿ ಎರಡೂ ಮಾತಿಲ್ಲ.-ಬೇದ್ರೆ ಮಂಜುನಾಥ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ ಕೇಂದ್ರ, ಮೈಸೂರು----ಪ್ರೊ.ಕೆ. ಕೆಂಪೇಗೌಡ ಅವರು ಭಾಷೆ ಮತ್ತು ಭಾಷಾ ವಿಜ್ಞಾನ, ಸಾಮಾನ್ಯ ಭಾಷಾ ವಿಜ್ಞಾನ ಮುಂತಾದ ಮೌಲಿಕ ಕೃತಿಗಳನ್ನು ರಚಿಸಿದ್ದರು. ಅವರ ನಿಧನದಿಂದ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ನಷ್ಟವಾಗಿದೆ.- ಎಸ್‌. ಚನ್ನಪ್ಪ, ಅಧ್ಯಕ್ಷರು, ಕುವೆಂಪು ವಿಚಾರ ವೇದಿಕೆ--ಪ್ರೊ.ಕೆ. ಕೆಂಪೇಗೌಡರು ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದರು. ಅವರು ಪ್ರಾತಃಸ್ಮರಣೀಯರು- ಪ್ರೊ.ಎಂ. ನಂಜಯ್ಯ ಹೊಂಗನೂರು, ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿವಿ