ಗಾರ್ಬೇಜ್‌ ಯಾರ್ಡ್‌ನಿಂದ ಹರಿಯುತ್ತಿದೆ ಗಲೀಜು ನೀರು

| Published : Aug 16 2024, 12:46 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ನಿತ್ಯ ಸಂಗ್ರಹಿಸುವ ಕಸವನ್ನು ಗಾರ್ಬೇಜ್‌ ಯಾರ್ಡ್‌ಗೆ ತಂದು ಹಾಕಲಾಗುತ್ತದೆ. ಇದೀಗ ಇದು ಬೆಟ್ಟದಷ್ಟು ದುರ್ವಾಸನೆ ಬೀರುತ್ತಿದೆ. ಇದೀಗ ಗಲೀಜು ನೀರು ಸಹ ರಸ್ತೆಗೆ ಹರಿದು ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಬರಬಹುದೆಂಬ ಆತಂಕ ಜನರಲ್ಲಿ ಮನೆ ಮಾಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇಷ್ಟು ದಿನ ಬರೀ ದುರ್ವಾಸನೆ, ದಟ್ಟ ಹೊಗೆ ಹೊರಸೂಸುತ್ತಿದ್ದ ಇಲ್ಲಿನ ಕಾರವಾರ ರಸ್ತೆಯಲ್ಲಿನ ಗಾರ್ಬೆಜ್‌ ಯಾರ್ಡ್‌ನಿಂದ ಇದೀಗ ಗಲೀಜು ನೀರು ಹರಿದು ಬರುತ್ತಿದೆ. ಸಾಂಕ್ರಾಮಿಕ ರೋಗಗಳಿಗೆ ಮುಕ್ತ ಆಹ್ವಾನ ನೀಡುವಂತಾಗುತ್ತಿದ್ದು, ಈ ಭಾಗದ ನಿವಾಸಿಗಳು, ಬೈಕ್‌ ಸವಾರರ ನಿದ್ದೆ ಗೆಡಿಸುತ್ತಿದೆ.

ಪ್ರತಿದಿನ ಹುಬ್ಬಳ್ಳಿಯಲ್ಲಿ ಕನಿಷ್ಠವೆಂದರೂ 250-300 ಟನ್‌, ಧಾರವಾಡದಲ್ಲಿ 100-150 ಟನ್‌ ವರೆಗೂ ಕಸ ಸಂಗ್ರಹವಾಗುತ್ತದೆ. ಹುಬ್ಬಳ್ಳಿಯಲ್ಲಿ ಸಂಗ್ರಹವಾಗುವ ಕಸವನ್ನು ಕಾರವಾರ ರಸ್ತೆಯಲ್ಲಿನ ಗಾರ್ಬೆಜ್‌ ಯಾರ್ಡ್‌ನಲ್ಲಿ ಹಾಕಲಾಗುತ್ತದೆ. ಇದು ಕಸದ ಬೆಟ್ಟದಂತೆ ಭಾಸವಾಗುತ್ತಿದೆ. 2021ರಲ್ಲಿ ನಡೆದ ಸಮೀಕ್ಷೆಯಂತೆ 3.60 ಲಕ್ಷ ಟನ್‌ ಕಸ ಸಂಗ್ರಹವಾಗಿದೆ. ಅದೀಗ ಕನಿಷ್ಠವೆಂದರೂ 4ರಿಂದ 4.50 ಲಕ್ಷ ಟನ್‌ಗೂ ಅಧಿಕ ಕಸ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ಇಷ್ಟು ದಿನ ಬರೀ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ದಟ್ಟ ಹೊಗೆ ಬರುತ್ತದೆ. ಕಸದ ಧೂಳು, ದುರ್ವಾಸನೆ ನಿರಂತರವಾಗಿ ಹೊರಸೂಸುತ್ತದೆ. ರೋಗ ರುಜಿನಗಳ ತಾಣವಾಗಿದೆ ಎಂದೆಲ್ಲ ಆರೋಪ ಕೇಳಿ ಬರುತ್ತಿತ್ತು. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಸದ ರಾಶಿಯ ಬೆಟ್ಟದಿಂದ ಗಲೀಜು ನೀರು ರಸ್ತೆಗೆ ಹರಿದು ಬರುತ್ತಿದೆ.

ಹಾಗೆ ನೋಡಿದರೆ ನಿತ್ಯ ನಿರಂತರವೆಂಬಂತೆ ಸಣ್ಣದಾಗಿ ಗಲೀಜು ನೀರು ಹರಿದು ಬರುತ್ತಲೇ ಇದೆ. ಅದರಲ್ಲೂ ಸ್ವಲ್ಪ ಮಳೆಯಾದರೆ ವಿಪರೀತ ಎನ್ನುವಂತೆ ಗಾರ್ಬೇಜ್‌ ಯಾರ್ಡ್‌ನಿಂದ ಕೊಳಚೆ ನೀರು ಹರಿದು ಬರುತ್ತಿದ್ದು ದುರ್ವಾಸನೆ ಬೀರುತ್ತಿದೆ. ಈ ಕೊಳಚೆ ನೀರಲ್ಲೇ ಪಾದಚಾರಿಗಳು, ಬೈಕ್‌ ಸವಾರರು ಚಲಿಸಬೇಕು. ಕೆಲವೊಮ್ಮೆ ಅಂತೂ ಕಾರುಗಳು ಇದರಲ್ಲಿ ಸಂಚರಿಸುವುದರಿಂದ ಪಾದಚಾರಿಗಳಿಗೆ ಕೊಳಚೆ ನೀರಿಂದಲೇ ಸ್ನಾನ ಮಾಡಿದಂತಾಗುತ್ತದೆ.

ಸಾಂಕ್ರಾಮಿಕ ರೋಗಗಳ ತಾಣ:

ಮೊದಲೇ ಇದು ಸಾಂಕ್ರಾಮಿಕ ರೋಗಗಳ ತಾಣವಾಗಿದೆ. ಇದೀಗ ಗಾರ್ಬೇಜ್‌ ಯಾರ್ಡ್‌ನಿಂದ ಹರಿದು ಬರುತ್ತಿರುವ ಕೊಳಚೆ ನೀರು ಮಹಾ ಸಾಂಕ್ರಾಮಿಕ ರೋಗಗಳನ್ನು ಎಲ್ಲಿ ತಂದೊಡ್ಡೊತ್ತದೆಯೋ ಎಂಬ ಭೀತಿ ಜನರಲ್ಲಿ ಉಂಟಾಗಿದೆ. ಮೊದಲಿಗೆ ಮಳೆ ಬಂದಾಗಲಷ್ಟೇ ಬರುತ್ತಿದ್ದ ನೀರು ಇದೀಗ ನಿರಂತರ ಎನ್ನುವಂತಾಗಿದೆ. ಮೊದಲೇ ಡೆಂಘೀಯಂತಹ ರೋಗಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇವೆ. ಅಂತಹದ್ದರಲ್ಲಿ ಇಲ್ಲಿನ ಕೊಳಚೆ ನೀರು ಮತ್ತಷ್ಟು ಹೈರಾಣು ಮಾಡುತ್ತಿದೆ. ಕೂಡಲೇ ಪಾಲಿಕೆ ನಿರ್ಲಕ್ಷ್ಯ ತಾಳದೇ ಇಲ್ಲಿನ ಕೊಳಚೆ ನೀರು ಬಾರದಂತೆ ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಬಯೋಮೈನಿಂಗ್‌:

ಕಸದ ಬೆಟ್ಟದಿಂದ ಕೊಳಚೆ ನೀರು ರಸ್ತೆಗೆ ಹರಿದು ಬರುವುದು ಗಮನಕ್ಕೆ ಬಂದಿದೆ. ಅಲ್ಲಲ್ಲಿ ಕ್ರಮಕೈಗೊಳ್ಳಲಾಗಿದೆ. ಆದರೆ ಇದು ಪೂರ್ಣವಾಗಿ ನಿಲ್ಲಬೇಕೆಂದರೆ ಕಸದ ಬೆಟ್ಟ ಕರಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಬಯೋಮೈನಿಂಗ್‌ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಟೆಂಡರ್‌ ಕರೆದು ಗುತ್ತಿಗೆ ಕೂಡ ನೀಡಲಾಗಿದೆ. ಶೀಘ್ರದಲ್ಲೇ ಕೆಲಸ ಶುರುವಾಗಲಿದೆ. ಆರು ತಿಂಗಳಲ್ಲಿ ಶೇ. 60ರಷ್ಟು ಕಸದ ಬೆಟ್ಟ ಕರಗಲಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ, ಸಾರ್ವಜನಿಕರು ಮಾತ್ರ ಕಳೆದ ಹಲವು ವರ್ಷಗಳಿಂದಲೂ ಪಾಲಿಕೆ ಇದನ್ನೇ ಹೇಳಿಕೊಳ್ಳುತ್ತಲೇ ಬರುತ್ತಿದೆ. ಇನ್ನಾದರೂ ಬರೀ ಹೇಳಿಕೆಯಾಗದೇ ಕ್ರಮವಾಗಲಿ ಎಂದು ಆಗ್ರಹಿಸುತ್ತಾರೆ.

ಒಟ್ಟಿನಲ್ಲಿ ಕಸದ ಬೆಟ್ಟದಿಂದ ಹರಿದು ಬರುತ್ತಿರುವ ಕೊಳಚೆ ನೀರು ಜನರನ್ನು ಹೈರಾಣು ಮಾಡಿರುವುದಂತೂ ಸತ್ಯ.ಕಾರವಾರ ರಸ್ತೆಯಲ್ಲಿನ ಗಾರ್ಬೇಜ್‌ ಯಾರ್ಡ್‌ನಿಂದ ಕೊಳಚೆ ನೀರು ಬರುವುದು ನಿಜ. ಆದರೆ ಸಂಗ್ರಹವಾಗಿರುವ ಕಸವನ್ನು ಕರಗಿಸಲು ಬಯೋಮೈನಿಂಗ್‌ ಮಾಡಲು ಈಗಾಗಲೇ ವರ್ಕ್‌ ಆರ್ಡರ್‌ ಕೊಡಲಾಗಿದೆ. ಶೀಘ್ರದಲ್ಲೇ ಕೆಲಸ ಶುರುವಾಗಲಿದೆ. ಕಸದ ಬೆಟ್ಟದ ಕರಗಿದರೆ ಈ ರೀತಿ ಸಮಸ್ಯೆಯಾಗಲ್ಲ ಎಂದು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಲ್ಲಿಕಾರ್ಜುನ ತಿಳಿಸಿದರು.