ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಂಗವಿಕಲತೆ ಅಡ್ಡಿ ಆಗದು

| Published : Nov 26 2024, 12:46 AM IST

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಂಗವಿಕಲತೆ ಅಡ್ಡಿ ಆಗದು
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಕಲಚೇತನರ ಕ್ರೀಡಾಕೂಟವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾದಲ್ಲಿ ಅಂಗವಿಕಲತೆ ಅಡ್ಡಿಯಾಗದೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು. ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸಾಧಿಸುವ ಛಲ, ಕಠಿಣ ಪರಿಶ್ರಮ ಇದ್ದರೆ ಅಂಗವೈಕಲ್ಯ ಏನೂ ಮಾಡುವುದಿಲ್ಲವೆಂದರು. ಅಂಗವಿಕಲರು ತಮ್ಮ ದೈಹಿಕ ನ್ಯೂನತೆಗಳ ಬಗ್ಗೆ ಕೀಳರಿಮೆ ಬಿಡಬೇಕು. ವಿಕಲಚೇತನರು ಪ್ಯಾರಾ ಒಲಂಪಿಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ. ಹಾಗಾಗಿ ಅಂಗವಿಕಲತೆ ಎಂಬ ಕೀಳರಿಮೆಯನ್ನು ಮನಸ್ಸಿನಿಂದ ಬಿಟ್ಟು, ತಮ್ಮ ಗುರಿಯೊಂದಿಗೆ ಕ್ರಿಯಾಯೋಜನೆ ರೂಪಿಸಿಕೊಂಡು ಕಠಿಣ ಪರಿಶ್ರಮಪಟ್ಟರೆ ಸಾಧನೆ ಮಾಡುವುದು ಕಷ್ಟಕರವೇನಲ್ಲ. ಸಮಾಜದಲ್ಲಿ ಸ್ವಾವಲಂಬನೆಯಿಂದ ಬದುಕುವ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಹಾಗೂ ಗೌರವಯುತ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಈ ಬಾರಿ ಒಂದು ವಾರ ವಿಕಲಚೇತನರ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಕಲಚೇತನರಿಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ, ಶಾಲಾ ಕಾಲೇಜುಗಳಲ್ಲಿ 2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗಮನ ಸೆಳೆದವು. 18ವರ್ಷ ಮೇಲ್ಪಟ್ಟ ಶ್ರವಣ ದೋಷ ಮತ್ತು ದೈಹಿಕ ವಿಕಲಚೇತರಿಗೆ 100ಮೀ ಓಟ, ಗುಂಡು ಎಸೆತ, ಜಾವಲಿನ್ ಥ್ರೋ ಮತ್ತು ಬುದ್ದಿಮಾಂದ್ಯರಿಗೆ 100ಮೀ ಓಟ, ಬಕೆಟ್‍ನಲ್ಲಿ ರಿಂಗ್ ಎಸೆತ, ಮ್ಯೂಜಿಕಲ್ ಚೇರ್ ಹಾಗೂ ಅಂಧ ವಿಶೇಷಚೇತನರಿಗೆ ಮಡಿಕೆ ಹೊಡೆಯುವುದು, ಕೇನ್ ರೇಸ್ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಸ್ಪರ್ಧೆ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟ ದೃಷ್ಟಿದೋಷ, ದೈಹಿಕ ಮತ್ತು ಬೌದ್ಧಿಕ ವಿಕಲತೆ ವಿಕಲಚೇತನರಿಗೆ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಸ್ಪರ್ಧೆಗಳು ಜರುಗಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ವಿಜಯ್ ಕುಮಾರ್, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲೇಶ್ ಸೇರಿದಂತೆ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂಗಳು ಇದ್ದರು.