ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಷನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಚಶನ್ ಸ್ಟಿಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ 9 ರಂದು ನಗರದ ಮೆಳೆಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್‌ನಲ್ಲಿ ವಿಕಲಚೇತನರ ಸಮಾವೇಶ ಏರ್ಪಾಟಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಷನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಚಶನ್ ಸ್ಟಿಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ 9 ರಂದು ನಗರದ ಮೆಳೆಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್‌ನಲ್ಲಿ ವಿಕಲಚೇತನರ ಸಮಾವೇಶ ಏರ್ಪಾಟಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಇಕ್ಬಾಲ್ ಮಜೀದ್ ಫೌಂಡೇಷನ್‌ನ ಇಕ್ಬಾಲ್ ಅಹ್ಮದ್ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ವಿಕಲಚೇತನರು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಇದಕ್ಕಾಗಿ ಸರ್ಕಾರ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು. ವಿಕಲಚೇತನರು ಸ್ವಯಂ ಉದ್ಯೋಗ ನಡೆಸಲು ಆರ್ಥಿಕ ನೆರವು ಅಗತ್ಯವಿದ್ದು ರಾಜ್ಯ ಸರ್ಕಾರ ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಸಾಲಸೌಲಭ್ಯ, ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.ಸಾಮಾನ್ಯ ಬಸ್‌ಗಳಲ್ಲಿ ವಿಕಲಚೇತನರು ಪ್ರಯಾಣ ಮಾಡಲು ಅನುಕೂಲ ಇರುವುದಿಲ್ಲ. ಜಿಲ್ಲೆಯಲ್ಲಿ ಸುಮಾರು 49 ಸಾವಿರ ವಿಕಲಚೇತನರಿದ್ದಾರೆ ಇವರಲ್ಲಿ ಬಹಳಷ್ಟು ಮಂದಿ ಕ್ರೀಡಾಪಟುಗಳಿದ್ದಾರೆ. ಇಂತಹವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟಗಳಿಗೆ ಹೋಗಿಬರಲು ಸರ್ಕಾರ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ವಿಕಲಚೇತನ ಕಲಾವಿದರು, ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ, ಅವಕಾಶ ದೊರಕಿಸಿ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು ಎಂದು ಇಕ್ಬಾಲ್ ಅಹ್ಮದ್ ಹೇಳಿದರು.ಇದೇ 9 ರಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಕಲಚೇತನರ ಸಮಾವೇಶ ಉದ್ಘಾಟಿಸುವರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಸೈಯದ್ ಮುಜೀಬ್ ಅಹಮದ್, ರಾಜ್ಯ ವಾಕ್ ಶ್ರವಣ ತಜ್ಞರ ಸಂಘದ ಅಧ್ಯಕ್ಷೆ ಚೈತ್ರ ಕೊಟ್ಟ ಶಂಕರ್, ಇಲಾಖೆ ಅಧಿಕಾರಿಗಳು, ಮತ್ತಿತರ ಗಣ್ಯರು ಭಾಗವಹಿಸುವರು. ವಿಕಲಚೇತನರು ಮಾಡಬಹುದಾದ ಸ್ವಯಂ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಂಗವೈಕಲ್ಯದ ಬಗ್ಗೆ ಇರುವ ಮುಜುಗರ ಹೋಗಲಾಡಿಸಲು ಚರ್ಚೆ, ಕೌನ್ಸಿಲಿಂಗ್ ಮೂಲಕ ಮಾನಸಿಕ ಆರೋಗ್ಯ ವೃದ್ಧಿಸುವುದು, ಸ್ವಯಂ ಉದ್ಯೋಗ ಆರಂಭಿಸಲು ತಜ್ಞರ ಸಲಹೆ ಪಡೆಯುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಎಸ್.ಬಾಬು ಮಾತನಾಡಿದರು. ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಮುರುಗೇಶ್, ಮುಖಂಡರಾದ ಗುರುಪ್ರಸಾದ್, ಶಬ್ಬೀರ್ ಪಾಷಾ, ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮಹಮದ್ ಅಲಿ, ಜಾಪೆಕ್ಸ್ ಮೊದಲಾದವರು ಹಾಜರಿದ್ದರು.

ಬಾಕ್ಸ್‌..

ವಿಕಲಚೇತನರ ವಧುವರರ ವೇದಿಕೆ

ವಿಕಲಚೇತನರಿಗೂ ಸಮಾನ ಹಕ್ಕುಗಳಿದ್ದು ಅವರು ಸಹ ಸಾಮಾನ್ಯರಂತೆ ಜೀವನ ನಡೆಸಲಿ ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಸಮಾವೇಶದಲ್ಲಿ ವಿಕಲಚೇತನರ ವಧುವರರ ವೇದಿಕೆ ಆರಂಭಿಸಲಾಗುತ್ತಿದೆ. ಆ ಮೂಲಕ ಅವರಿಗೂ ಕಂಕಣ ಭಾಗ್ಯ ಸಿಕ್ಕು ಅವರು ಸಹ ಜೀವನದಲ್ಲಿ ಸಂತೋಷವಾಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿದೆ. ಜೊತೆಗೆ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಇದೇ ವೇಳೆ ಫಲಾನುಭವಿಗಳಿಗೆ ಶ್ರವಣ ಯಂತ್ರ ಸೇರಿದಂತೆ ವಿವಿಧ ಸವಲತ್ತುಗಳ ವಿತರಣೆ ಮಾಡಲಾಗುವುದು ಎಂದು ಇಕ್ಬಾಲ್‌ ಅಹ್ಮದ್‌ ತಿಳಿಸಿದರು.