ಗ್ರಾಮೀಣ ಭಾಗದಲ್ಲಿ ಜನಪದ ಸೊಗಡು ಕಣ್ಮರೆ: ಯೋಗೇಶ್

| Published : Jan 19 2024, 01:51 AM IST

ಸಾರಾಂಶ

ಚನ್ನಪಟ್ಟಣ: ಸಮಾಜದಲ್ಲಿ ಒಗ್ಗಟ್ಟು ಒಡೆದು ಸ್ವಾರ್ಥ, ಲೋಲಪತೆ ರಾರಾಜಿಸುತ್ತಿದ್ದು, ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಮರೆಯಾಗುತ್ತಿದೆ. ಸ್ನೇಹ ಸಂಬಂಧವನ್ನು ಬೆಸೆಯುತ್ತಿದ್ದ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ ಎಂದು ಲೇಖಕ ಯೋಗೇಶ್ ಚಕ್ಕೆರೆ ಬೇಸರ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಸಮಾಜದಲ್ಲಿ ಒಗ್ಗಟ್ಟು ಒಡೆದು ಸ್ವಾರ್ಥ, ಲೋಲಪತೆ ರಾರಾಜಿಸುತ್ತಿದ್ದು, ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಮರೆಯಾಗುತ್ತಿದೆ. ಸ್ನೇಹ ಸಂಬಂಧವನ್ನು ಬೆಸೆಯುತ್ತಿದ್ದ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ ಎಂದು ಲೇಖಕ ಯೋಗೇಶ್ ಚಕ್ಕೆರೆ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣರಲ್ಲಿ ಜನಪದ ಸೊಗಡು, ಪರಂಪರೆ ಮತ್ತು ಸಂಸ್ಕೃತಿ ಮಾಯವಾಗುತ್ತಿದ್ದು, ಮಾತೃಭಾಷೆಯ ಹಿನ್ನಡೆಗೆ ಕಾರಣವಾಗುತ್ತಿದೆ. ಹಬ್ಬ ಹರಿದಿನಗಳು ವೈಭವೋಪೇತವಾಗುತ್ತಿದ್ದು, ಪ್ರೀತಿ, ವಿಶ್ವಾಸ ಪೇಲವವಾಗುತ್ತಿವೆ. ಸಾಹಿತ್ಯ ಇಂತಹ ಗೊಂದಲಗಳಿಗೆ ಸೇತುವೆಯಂತೆ ಕಾರ್ಯನಿರ್ವಹಿಸಬೇಕು. ಈ ದಿಸೆಯಲ್ಲಿ ಎಲ್ಲರನ್ನೂ ಪುನಃ ಒಗ್ಗೂಡಿಸುವ ಪ್ರಯತ್ನ ಬರಹಗಾರರಿಂದ ಶುರುವಾಗಲಿ ಎಂದರು.

ಹಿರಿಯ ಕವಿ ಕೂರಣಗೆರೆ ಕೃಷ್ಣಪ್ಪ ಮಾತನಾಡಿ, ಪೂರ್ವಜರು ಪ್ರಕೃತಿಯ ಆರಾಧನೆ ಮೂಲಕ ಬದುಕನ್ನು ಕಂಡುಕೊಂಡವರು. ಅವರು ಕಟ್ಟಿ ಬೆಳೆಸಿದ ಮೇಲ್ಪಂಕ್ತಿಯನ್ನು ಅನುಸರಿಸುವ ಮನಸ್ಥಿತಿಯನ್ನು ಇಂದಿನ ಯುವಜನರು ಬೆಳೆಸಿಕೊಳ್ಳಬೇಕು. ಆಧುನಿಕ ಜೀವನವು ರೋಗ ರುಜಿನಗಳಿಗೆ ದೂಡುತ್ತಿದ್ದು, ಹೈಬ್ರೀಡ್ ವ್ಯವಸಾಯ, ಲಾಭಕೋರತನ, ವೇಗದ ಶ್ರೀಮಂತಿಕೆ, ಹಿರಿಯರ ತಾತ್ಸಾರತೆ ಭವಿಷ್ಯದಲ್ಲಿ ವಿನಾಶವನ್ನು ತಂದೊಡ್ಡುವುದು ಖಚಿತ ಎಂದರು.

ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಪ್ರಾಸ್ತಾವಿಕ ಮಾತನಾಡಿದರು.ಮಾಕಳಿ ಪಟೇಲ್ ಚಂದ್ರೇಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಲೋಕೇಶ್, ಬ್ಯಾಂಕ್ ತಮ್ಮಣ್ಣ ಸುಳ್ಳೇರಿ, ಹೋರಿ ಬಸವರಾಜು ಸುಗ್ಗನಹಳ್ಳಿ, ವಿ ರಾಹುಲ್, ಧನುಷ್ ರಾಜೇ ಅರಸ್ ಹಾಜರಿದ್ದರು. ಕವಿಗೋಷ್ಠಿಯಲ್ಲಿ ಯೋಗೇಶ್ ದ್ಯಾವಪಟ್ಟಣ, ಲಕ್ಷ್ಮೀ ಕಿಶೋರ್ ಅರಸ್, ಮೇದರದೊಡ್ಡಿ ಹನುಮಂತು, ತುಂಬೇನಹಳ್ಳಿ ಕಿರಣ್ ರಾಜ್, ಸುದರ್ಶನ ಎಂ.ಎ ಸ್ವರಚಿತ ಕವಿತೆಗಳನ್ನು ವಾಚಿಸಿದರು.