ಹಿಂದಿನ 11 ವರ್ಷಗಳ ಅತ್ಯಂತ ಕಳಪೆ ಬಜೆಟ್ ಇದಾಗಿದೆ. ಹಿಂದಿನ ವರ್ಷದ ಬಜೆಟ್ ಈ ವರ್ಷದ ಬಜೆಟ್‌ಗೂ ವ್ಯತ್ಯಾಸವಿಲ್ಲ. ಬರೀ ವಿಕಸಿತ ಭಾರತ ಎನ್ನುವುದು ಘೋಷಣೆ ಬಿಟ್ಟರೆ ಮತ್ತೇನೂ ಇಲ್ಲ

ಹೊಸಪೇಟೆ: ಇಂದಿನ ಕೇಂದ್ರ ಬಜೆಟ್ ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆ ದೃಷ್ಟಿಯಿಂದ ಮಂಡನೆ ಮಾಡಿದ್ದಾರೆ. ಯಾವುದೇ ಹೊಸ ಘೋಷಣೆ ಇಲ್ಲ. ಹಿಂದಿನ 11 ವರ್ಷಗಳ ಅತ್ಯಂತ ಕಳಪೆ ಬಜೆಟ್ ಇದಾಗಿದೆ. ಹಿಂದಿನ ವರ್ಷದ ಬಜೆಟ್ ಈ ವರ್ಷದ ಬಜೆಟ್‌ಗೂ ವ್ಯತ್ಯಾಸವಿಲ್ಲ. ಬರೀ ವಿಕಸಿತ ಭಾರತ ಎನ್ನುವುದು ಘೋಷಣೆ ಬಿಟ್ಟರೆ ಮತ್ತೇನೂ ಇಲ್ಲ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಇತಿಹಾಸದಲ್ಲೇ ಅತ್ಯಂತ ದಿವಾಳಿ ಸರ್ಕಾರವನ್ನು ಮುನ್ನಡೆಸುತ್ತಿರುವ ಸ್ವಯಂಘೋಷಿತ ಆರ್ಥಿಕ ತಜ್ಞ ನಿರ್ಮಾಣ ಸೀತಾರಾಮ ಕಾರ್ಯವೈಖರಿಯಾಗಿದೆ. ದೇಶದ ಕೈಗಾರಿಕಾ ವಲಯ, ಕೃಷಿ, ಆಮದು ಮತ್ತು ರಫ್ತು, ವಾಣಿಜ್ಯ, ಅಂತಾರಾಷ್ಟ್ರೀಯ ವ್ಯವಹಾರ ಬಗ್ಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಮಂಡನೆ ನಂತರ ದೇಶದ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಇಲಾಖೆವಾರು ಅನುದಾನವನ್ನು ಬಹಳಷ್ಟು ಕಡಿತ ಮಾಡಿದ್ದು ಕಂಡು ಬಂದಿದೆ. ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ದೇಶದ ರಕ್ಷಣಾ, ಶಿಕ್ಷಣ ಆರೋಗ್ಯ, ಕೃಷಿಗೆ ಅನುದಾನ ಹೆಚ್ಚು ಹಂಚಿಕೆ ಮಾಡುವ ನಿರೀಕ್ಷೆ ಇತ್ತು. ಅನುದಾನ ಕೊರತೆ ಎದ್ದು ಕಾಣುತ್ತಿದೆ. ಇಂತಹ ಕಳಪೆ ಬಜೆಟ್ ಮಂಡನೆ ಮಾಡಿದ್ದಾರೆ. ದೇಶದ ವಿದೇಶಿ ಸಾಲ ವರ್ಷದಿಂದ ವರ್ಷಕ್ಕೆ ಮತ್ತು ಬಡ್ಡಿ ಹೆಚ್ಚಾಗುತ್ತಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಇಳಿದಿದೆ, ಡಾಲರ್ ಬೆಲೆ ಹೆಚ್ಚಾಗಿದೆ ಎಂದರು.

ದೇಶಕ್ಕೆ ವಿದೇಶಿ ಬಂಡವಾಳ ಹರಿದು ಬಂದಿಲ್ಲ. ದೇಶದ ಬೆನ್ನೆಲುಬಾದ ಸಣ್ಣ ಕೈಗಾರಿಕೆಗಳು ಬಂದಾಗಿವೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಯಾವುದೇ ಯೋಜನೆಗಳು ಇಲ್ಲ. ರಾಜ್ಯಗಳಿಂದ ನೀಡಬೇಕಿದ್ದ ಜಿಎಸ್‌ಟಿ ಬಾಕಿ ಹಣ ಸರಿಯಾಗಿ ಹಂಚಿಕೆ ಆಗಿಲ್ಲ. ದಕ್ಷಿಣ ರಾಜ್ಯಗಳಿಗೆ ನೀಡುವುದನ್ನು ಬಿಟ್ಟು, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಹಣ ನೀಡಿ ತಾರತಮ್ಯ ಮಾಡಿದ್ದಾರೆ. ದೇಶದ ವಿದ್ಯಾವಂತ ಯುವಕ ಯುವಕರಿಗೆ, ಮಹಿಳೆಯರಿಗೆ ಕೃಷಿ, ಕಾರ್ಮಿಕ ಮತ್ತು ಆಟೋಮೊಬೈಲ್ ಉದ್ದಿಮೆಕ್ಕೆ ಮತ್ತು ನೌಕರರಿಗೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.