ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದ ಮಹಿಳೆಯರಿಗೆ ನಿರಾಸೆ

| Published : Dec 28 2023, 01:47 AM IST

ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದ ಮಹಿಳೆಯರಿಗೆ ನಿರಾಸೆ
Share this Article
  • FB
  • TW
  • Linkdin
  • Email

ಸಾರಾಂಶ

ಗೃಹಲಕ್ಷ್ಮೀ ನೋಂದಣಿ ಸಲುವಾಗಿ ಲಕ್ಷ್ಮೇಶ್ವರ ಪುರಸಭೆಗೆ ಆಗಮಿಸಿದ್ದ ಮಹಿಳೆಯರಿಗೆ ಅಲ್ಲಿ ನೋಂದಣಿ ಮಾಡುತ್ತಿಲ್ಲ ಎಂದು ತಿಳಿದು ನಿರಾಸೆಯಿಂದ ಮನೆಗೆ ಮರಳಿದ್ದಾರೆ.

ಲಕ್ಷ್ಮೇಶ್ವರ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು ಬಯಸಿದ ನೂರಾರು ಮಹಿಳೆಯರು ಬುಧವಾರ ಪಟ್ಟಣದ ಪುರಸಭೆಗೆ ಆಗಮಿಸಿ ನೋಂದಣಿ ಮಾಡಿಕೊಳ್ಳುವಂತೆ ಪುರಸಭೆಯ ಸಿಬ್ಬಂದಿಗೆ ಆಗ್ರಹಿಸಿ ವಾಪಸ್ ಹೋದ ಘಟನೆ ನಡೆಯಿತು. ಪಟ್ಟಣದ ಪುರಸಭೆಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಲು 3 ದಿನಗಳ ಕಾಲ ವಿಶೇಷ ಶಿಬಿರ ಹಮ್ಮಿಕೊಂಡಿರುವ ಕುರಿತು ಪಟ್ಟಣದ ವಿವಿಧ ವಾರ್ಡ್‌ಗಳ ಅಂಗನವಾಡಿ ಕಾರ್ಯಕರ್ತರು ತಿಳಿಸಿದ್ದರಿಂದ ನೂರಾರು ಸಂಖ್ಯೆಯ ಮಹಿಳೆಯರು ಪುರಸಭೆಗೆ ಆಗಮಿಸಿದ್ದರು. ಆದರೆ ಅಲ್ಲಿ ನೋಂದಣಿಗೆ ವ್ಯವಸ್ಥೆ ಇರಲಿಲ್ಲ. ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಸ್ಪಷ್ಟನೆ ನೀಡಿ, ಗೃಹಲಕ್ಷ್ಮೀ ಯೋಜನೆಯ ತಿದ್ದುಪಡಿ ಹಾಗೂ ನೋಂದಣಿ ಮಾಡಿಸಿಕೊಳ್ಳುವ ಕುರಿತಾಗಿ ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ನೋಂದಣಿ ಮಾಡಿಕೊಳ್ಳುವ ಕಾರ್ಯ ನಡೆಸುತ್ತಿಲ್ಲ. ಮಹಿಳೆಯರಿಗೆ ಅಂಗನಾಡಿ ಕಾರ್ಯಕರ್ತರು ತಪ್ಪು ಮಾಹಿತಿ ನೀಡಿದ್ದಾರೆ. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಎದುರಿಸುತ್ತಿರುವ ತೊಂದರೆ ತಪ್ಪಿಸಲು ವಿಶೇಷ ಶಿಬಿರ ಹಮ್ಮಿಕೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಸರ್ಕಾರ ನೀಡಿಲ್ಲ. ಇದು ಅಂಗನವಾಡಿ ಕಾರ್ಯಕರ್ತರಲ್ಲಿ ಉಂಟಾಗಿರುವ ತಪ್ಪು ಕಲ್ಪನೆಯಿಂದಾಗಿದೆ ಎಂದು ಹೇಳಿದರು.

ಈ ವೇಳೆ ಸಾವಿತ್ರಿ ಸಾತಪೂತೆ ಮಾತನಾಡಿ, ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಸರ್ಕಾರ ಮಹಿಳೆಯರ ಖಾತೆಗೆ ₹2 ಸಾವಿರ ಹಣ ಹಾಕುವುದಾಗಿ ಹೇಳಿದೆ. ಆದರೆ ನಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ. ಆದ್ದರಿಂದ ಈ ಕುರಿತು ಆಗಿರುವ ಲೋಪ ಸರಿಪಡಿಸಿಕೊಳ್ಳಲು ಪುರಸಭೆಗೆ ಆಗಮಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತರು ನಮಗೆ ಹೇಳಿದ್ದರಿಂದ ಇಲ್ಲಿಗೆ ಆಗಮಿಸಿದ್ದೇವೆ. ಆದರೆ ಇಲ್ಲಿ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ, ಪುರಸಭೆಯ ಸಿಬ್ಬಂದಿ ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದರು.